ಅಂಕೋಲಾ: ತಾಲೂಕಿನ ಕುಂಬಾರಕೇರಿಯ ಪುರಾತನ ಪ್ರಸಿದ್ಧ ಶ್ರೀಕದಂಬೇಶ್ವರ ದೇವಾಲಯದಲ್ಲಿ ಸೋಮವಾರ ಕಾರ್ತಿಕ ಪೌರ್ಣಿಮೆಯ ಪ್ರಯುಕ್ತ ದೀಪೋತ್ಸವ ಕಾರ್ಯಕ್ರಮ ಅತ್ಯಂತ ಸಂಭ್ರಮದಿಂದ ನಡೆಯಿತು.
ದೇವಾಲಯದ ಮುಖ್ಯ ಅರ್ಚಕ ಅವಿನಾಶ ಜೋಶಿ ಹಣತೆ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕುಂಬಾರಕೇರಿ, ಲಕ್ಷ್ಮೇಶ್ವರ ಮತ್ತು ತಾಲೂಕಿನ ವಿವಿಧ ಭಾಗಗಳ ಭಕ್ತರು ದೇವಾಲಯ ಮತ್ತು ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಎಣ್ಣೆ ದೀಪದ ಹಣತೆಯನ್ನು ಬೆಳಗಿ ದೀಪೋತ್ಸವದಲ್ಲಿ ಭಾಗಿಯಾದರು.
ದೇವಾಲಯದ ಆವರಣ, ಶ್ರೀನಾಗದೇವರ ಕಟ್ಟೆ, ಅಶ್ವಥ ಕಟ್ಟೆ ಸುತ್ತ ಮುತ್ತಲು ಹಣತೆ ದೀಪ ಬೆಳಗಿಸಲಾಗಿತ್ತು.
ದೀಪಗಳಿಂದಲೇ ದೀಪೋತ್ಸವ ಎಂಬ ಅಕ್ಷರ ರೂಪ ನೀಡಿ ಅದನ್ನು
ಬೆಳಗಿಸಿರುವುದು ಜನ ಮನ ಸೆಳೆಯಿತು.
ಶ್ರೀ ಮಹಾಗಣಪತಿ ದೇವಾಲಯದ ಭಜನಾ ಮಂಡಳಿ ಮತ್ತು ಖ್ಯಾತ ಭಜನಾ ಕಲಾವಿದರಿಂದ ಸುಶ್ರಾವ್ಯ ಭಜನಾ ಕಾರ್ಯಕ್ರಮ ನಡೆಯಿತು.
ಹಿರಿಯ ಹಿಂದೂ ಪ್ರಮುಖ ಸುರೇಶ್ಚಂದ್ರ ಬಾಟೆ ಅವರು ದೀಪೋತ್ಸವದ ಕುರಿತು ವಿಶೇಷ ಪ್ರವಚನ ನೀಡಿದರು.
ಊರ ಪ್ರಮುಖರು, ಭಕ್ತಾದಿಗಳು, ಊರ ನಾಗರಿಕರು ಉಪಸ್ಥಿತರಿದ್ದರು.