ರಂಗಭೂಮಿ‌ ಕಲಾವಿದರ ವೇದಿಕೆಯಿಂದ ಸಕಲಬೇಣ ಶಾಲೆಯಲ್ಲಿ ಗಾಯನ ಸ್ಪರ್ಧೆ, ಬಹುಮಾನ ವಿತರಣೆ.

ಅಂಕೋಲಾ : ತಾಲೂಕು ರಂಗಭೂಮಿ ಕಲಾವಿದರ ವೇದಿಕೆ ಅಂಕೋಲಾ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಟ್ಟಿಕೇರಿ ಇವರ ಸಂಯುಕ್ತ ಆಶ್ರಯದಲ್ಲಿ ಶಾಲಾ ಮಕ್ಕಳಿಗೆ ಗಾಯನ ಸ್ಪರ್ಧೆಯನ್ನು ಏರ್ಪಡಿಸಿ ಬಹುಮಾನ ವಿತರಿಸಲಾಯಿತು. ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಶಿಕ್ಷಣ ಸಂಯೋಜಕರಾದ ರಚನಾ ನಾಯಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ವೇಳೆ ಅವರು ಮಾತನಾಡಿ ಶಾಲೆಗಳಲ್ಲಿನ ಮಕ್ಕಳ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವಲ್ಲಿ ಸಂಘ ಸಂಸ್ಥೆಗಳ ಸಹಕಾರವೂ ಅವಶ್ಯವಿದೆ. ತಾಲೂಕ ರಂಗಭೂಮಿ ಕಲಾವಿದರ ವೇದಿಕೆಯವರು ಸರಕಾರಿ ಶಾಲೆಗೆ ಬಂದು ಸ್ಪರ್ಧಾ ಕಾರ್ಯಕ್ರಮ ನಡೆಸಿರುವದು ಶ್ಲಾಘನೀಯ. ಇಂತಹ ಕಾರ್ಯಕ್ರಮಗಳ ಮೂಲಕ ಗ್ರಾಮೀಣ ಭಾಗದ ಮಕ್ಕಳಿಗೂ ಅವಕಾಶ ದೊರೆತಂತಾಗುತ್ತದೆ ಎಂದರು. ಹಟ್ಟಿಕೇರಿ ಗ್ರಾ.ಪಂ. ಅಧ್ಯಕ್ಷೆ ನಿಶಾ ನಾಗರಾಜ‌ ನಾಯ್ಕ ಮಾತನಾಡಿ ಕಲಾವಿದರ ವೇದಿಕೆಯವರು ಸಕಲಬೇಣ ಸರಕಾರಿ ಶಾಲೆಯನ್ನು ಆಯ್ಕೆ ಮಾಡಿ ಕಾರ್ಯಕ್ರಮ ನಡೆಸಿರುವದಕ್ಕೆ ಅಭಿನಂದಿಸಿದರು. ಸಾಹಿತಿ ವಿಶ್ರಾಂತ ಶಿಕ್ಷಕ ಸಾತು ಗೌಡ ಬಡಗೇರಿ ಮಾತನಾಡಿ ಮಕ್ಕಳ ಪ್ರತಿಭೆಗಳನ್ನು ಹೊರತರಲು ಶಾಲಾ ಮಟ್ಟದಲ್ಲಿ ಹಲವಾರು ಕಾರ್ಯಕ್ರಮಗಳು ನಡೆಯುತ್ತವೆಯಾದರೂ ಸಾರ್ವಜನಿಕರ ಪ್ರೋತ್ಸಾಹವೂ ಬೇಕಾಗುತ್ತದೆ. ಪಾಲಕರು ತಮ್ಮ ಮಕ್ಕಳ ಮೇಲೆ ತೋರುವ ಅತಿಯಾದ ಮುದ್ದು ಒಳ್ಳೆಯದಲ್ಲ, ಅದು ಒಮ್ಮೊಮ್ಮೆ ಪೆದ್ದರಾಗಲೂ ಕಾರಣವಾಗುತ್ತದೆ. ಅದಕ್ಕಿಂತ ಗುರುವಿನ ಗುದ್ದು ಲೇಸು ಎಂದರು. ಹಾಗೂ ಮಕ್ಕಳ ಕುರಿತು ಸ್ವರಚಿತ ಚುಟುಕುಗಳನ್ನು ವಾಚಿಸಿದರು. ಶಾಲೆಯ ಮುಖ್ಯಾದ್ಯಾಪಕಿ ವೀಣಾ ಲಕ್ಷ್ಮೇಶ್ವರ ಕಲಾವಿದರ ವೇದಿಕೆಯ ಪದಾಧಿಕಾರಿಗಳನ್ನು ಹಾಗೂ ಸದಸ್ಯರನ್ನು ಅಭಿನಂದಿಸಿದರು. ಕಲಾವಿದರ ವೇದಿಕೆಯ ಸಹ ಕಾರ್ಯದರ್ಶಿ, ಪತ್ರಕರ್ತ ನಾಗರಾಜ ಜಾಂಬಳೇಕರ ಪ್ರಾಸ್ತಾವಿಕ ಮಾತನಾಡಿ ಗಾಯನ ಕಲೆಯು ರಂಗಭೂಮಿಯ ಒಂದು ಅಂಗ, ಮಕ್ಕಳಲ್ಲಿ ಇರುವ ಗಾಯನ ಕಲೆಯನ್ನು ಪ್ರೋತ್ಸಾಹಿಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. ವೇದಿಕೆಯಲ್ಲಿ ತಾಲೂಕ ರಂಗಭೂಮಿ ಕಲಾವಿದರ ವೇದಿಕೆಯ ಹಾಲಿ ಅಧ್ಯಕ್ಷ ದಯಾನಂದ ಆರ್ ನಾಯ್ಕ, ಕಾರ್ಯದರ್ಶಿ ವಿನಾಯಕ ನಾಯ್ಕ, ಎಸ್ ಡಿ ಎಮ್ ಸಿ ಅಧ್ಯಕ್ಷ ನಾರಾಯಣ ಥಾಕು ಗೌಡ, ಎಸ್ ಡಿ ಎಮ್ ಸಿ ಸದಸ್ಯ ಹಾಗೂ ತಾಲೂಕಾ ಹಾಲಕ್ಕಿ ಒಕ್ಕಲಿಗರ ಸಂಘದ ಮಾಜಿ ಅಧ್ಯಕ್ಷ ಸುರೇಶ ಗೌಡ ಉಪಸ್ಥಿತರಿದ್ದರು. ಶಿಕ್ಷಕ ಸುಬ್ರಾಯ ಗೌಡ ವಂದಿಸಿದರು.
ಕಲಾವಿದರ ವೇದಿಕೆಯ ಖಜಾಂಚಿ
ಸುಜೀತ ನಾಯ್ಕ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಖಜಾಂಚಿ ಗಣಪತಿ ಎಲ್ ನಾಯ್ಕ, ಸದಸ್ಯರಾದ ಶಿವಾನಂದ ನಾಯ್ಕ, ದಾಮು ನಾಯ್ಕ ಸಂಘಟನೆಗೆ ಸಹಕರಿಸಿದರು. ಗಾಯನ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳಾದ ಹನುಮಂತ ಸುರೇಶ ಗೌಡ ಪ್ರಥಮ, ರೂಪಾಲಿ ಉಮಾಕಾಂತ ತಳೇಕರ ದ್ವಿತೀಯ, ನಿಧಿ ನಾಗರಾಜ ನಾಯ್ಕ ತೃತೀಯ, ರಾಘವೇಂದ್ರ ಪಿ ಗೌಡ ನಾಲ್ಕನೇ, ರೋಶನ್ ಎನ್ ಗೌಡ ಐದನೇ, ಹಾಗೂ ಸುಪ್ರೀತ ಎಚ್ ಗೌಡ ಆರನೇ ಬಹುಮಾನ ಪಡೆದರು. ಹರ್ಷಿತ ಗೌಡ, ಪ್ರಥಮಾ ಗೌಡ, ವೈಭವಿ ಗೌಡ, ಪಲ್ಲವಿ ಗೌಡ, ಗೌತಮಿ ನಾಯ್ಕ ಸಮಾಧಾನಕರ ಬಹುಮಾನ ಪಡೆದರು.