ಮಾನಸಿಕ ಮತ್ತು ದೈಹಿಕ ಆರೋಗ್ಯ ಹೆಚ್ಚಿಸಲು ಕ್ರೀಡೆಗಳು ಅವಶ್ಯ. ಎನ್ ಜಿ‌ ನಾಯಕ.

ಅಂಕೋಲಾ : ಸರಕಾರಿ ನೌಕರರಿಗೆ ಕೆಲಸದ ಒತ್ತಡದ ನಡುವೆ ಮಾನಸಿಕ ಮತಗತು ದೈಹಿಕ ಆರೋಗ್ಯ ವೃದ್ಧಿಗೆ ಕ್ರೀಡೆಗಳು ಸಹಕಾರಿಯಾಗುತ್ತವೆ ಎಂದು ಕುಮಟಾ ಡಯಟ್ ಪ್ರಾಚಾರ್ಯ ಎನ್ ಜಿ ನಾಯಕ ಹೇಳಿದರು. ಅವರು ಅರಣ್ಯ ಇಲಾಖೆಯ ಆಶ್ರಯದಲ್ಲಿ ಅಂಕೋಲಾದ ತಾಲೂಕಾ ಕ್ರೀಡಾಂಗಣದಲ್ಲಿ ನಡೆದ ಕಾರವಾರ ವಿಭಾಗ ಮಟ್ಟದ ಕ್ರೀಡಾಕೂಟವನ್ನು ಧ್ವಜಾರೋಹಣ ಮತ್ತು ಸಿಂಗಾರ ಗೊನೆಯನ್ನು ಉದ್ಘಾಟಿಸಿ ಮಾತನಾಡಿ ಸದಾ ಕಚೇರಿ ಕೆಲಸ ಮತ್ತು ಅರಣ್ಯ ರಕ್ಷಣೆಯಲ್ಲಿ ತೊಡಗಿರುವ ಅರಣ್ಯ ಇಲಾಖೆಯ ಸಿಬ್ಬಂದಿಗಳಲ್ಲಿಯೂ ಉತ್ತಮ ಕ್ರೀಡಾಪ್ರತಿಭೆಗಳಿರುತ್ತವೆ. ಇಂತಹ ಕ್ರೀಡಾಕೂಟಗಳು ಪ್ರತಿಭೆಗಳಿಗೆ ಸೂಕ್ತ ವೇದಿಕೆ ಕಲ್ಪಿಸುತ್ತವೆ. ಇಲಾಖೆಯ ಕ್ರೀಡಾ ಪ್ರತಿಭೆಗಳು ರಾಷ್ಟ ಅಂತಾರಾಷ್ಟ್ರ ಮಟ್ಟದವರೆಗೂ ಮಿಂಚಲಿ ಎಂದರು‌. ಅರಣ್ಯ ಇಲಾಖೆಯ ಪರಿಸರ ಸಂರಕ್ಷಣೆಯ ಕಾರ್ಯಕ್ರಮಗಳಿಗೆ ಶಿಕ್ಷಣ ಇಲಾಖೆಯ ಅತೀ ಹೆಚ್ಚು ಸಹಯೋಗ ನೀಡುತ್ತಿದ್ದು ಮುಂದೆಯೂ ಸಹ ಸಹಕಾರ ನೀಡಲಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅರಣ್ಯ ಇಲಾಖೆಯ ಕಾರವಾರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಶಾಂತ ಕೆ ಸಿ ಮಾತನಾಡಿ ಜ್ಞಾನಕ್ಕೆ ಪಾಠ ಮತ್ತು ಆರೋಗ್ಯಕ್ಕೆ ಓಟ ಎನ್ನುವ ಮಾತಿನಂತೆ ಜ್ಞಾನ ಮತ್ತು ಉತ್ತಮ ಆರೋಗ್ಯಕ್ಕೆ ಕ್ರೀಡೆಗಳು ಸಹಕಾರಿಯಾಗಿದೆ. ದೈಹಿಕ ಮತ್ತು ಮಾನಸಿಕ ಆರೋಗ್ಯದ ಅಸಮತೋಲನದಿಂದ ಕಾಯಿಲೆಗಳು ಬಾರದಂತೆ ಆರೋಗ್ಯವನ್ನು ಕಾಪಾಡಿಕೊಳ್ಳಲು ಕ್ರೀಡೆಗಳಲ್ಲಿ ತೊಡಗುವದು ಸೂಕ್ತ ಎಂದರು. ಕಾರವಾರ ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ನಾವಿ ಮಾತನಾಡಿ ಕಾರವಾರ ಮತ್ತು ಅಂಕೋಲಾ ವಿಭಾಗದ ಅರಣ್ಯ ಇಲಾಖೆಯ ಕ್ರೀಡಾಪಟುಗಳು ಈಗಾಗಲೇ ಉತ್ತಮ ಸಾಧನೆ ತೋರಿದ್ದು ಈ ಕ್ರೀಡಾಕೂಟದಲ್ಲೂ ಕ್ರೀಡಾ ಮನೋಭಾವನೆಯಿಂದ ಪಾಲ್ಗೊಂಡು ಇನ್ನೂ ಹೆಚ್ಚಿನ ಸಾಧನೆ ಮಾಡಬೇಕೆಂದು ಶುಭ ಹಾರೈಸಿದರು.
ಆರಂಭದಲ್ಲಿ ಆಕರ್ಷಕ ಪಥಸಂಚಲನ ಅತಿಥಿಗಳಿಗೆ ಗೌರವ ಸಲ್ಲಿಸಲಾಯಿತು‌. ಬೀರಾ ಗೌಡ ನೇತೃತ್ವದಲ್ಲಿ, ಧನಂಜಯ ಸಿಖಂದರ, ನಯನಾ, ವೀಣಾ ದೇವಾಡಿಗ ಇವರು ಕ್ರೀಡಾ ಜ್ಯೋತಿಯನ್ನು ಅತಿಥಿಗಳಿಗೆ ಹಸ್ತಾಂತರಿಸಿದರು. ಕ್ರೀಡಾಕೂಟದ ದ್ಯೋತಕವಾಗಿ ಬಿಳಿ ಪಾರಿವಾಳವನ್ನು ಗಗನಕ್ಕೆ ಹಾರಿಬಿಡಲಾಯಿತು. ಹಾಗೂ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಕ್ರೀಡಾಪ್ರತಿಭೆ ಅನನ್ಯ ಮತ್ತು ರಾಜ್ಯ ಮಟ್ಟದ ಕ್ರೀಡಾ ಪ್ರತಿಭೆ ಈಶ್ವರ ಗೌಡ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಅಂಕೋಲಾ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೃಷ್ಣಯ್ಯ ಅಣ್ಣಯ್ಯ ಗೌಡ ಸ್ವಾಗತಿಸಿದರು. ಕಾರವಾರ ಉಪ ವಿಭಾಗದ
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಯೇಶ ಕೆ ಸಿ ವಂದಿಸಿದರು. ಅರ್ಪಿತಾ ಕಾರ್ಯಕ್ರಮ ನಿರ್ವಹಿಸಿದರು. ಮಂಜುನಾಥ ನಾಯ್ಕ ಪ್ರಾರ್ಥಿಸಿದರು. ವೇದಿಕೆಯಲ್ಲಿ ದೈಹಿಕ ಶಿಕ್ಷಣ ಪರಿವೀಕ್ಷಕ ಮಂಜುನಾಥ ನಾಯಕ ಹಾಗೂ ವಿವಿಧ ವಲಯಗಳ ಅಧಿಕಾರಿಗಳು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳು, ದೈಹಿಕ ಶಿಕ್ಷಕರಾದ ಪ್ರಕಾಶ ಕುಂಜಿ, ಶ್ರೀಧರ ನಾಯ್ಕ ಮುಂತಾದ ನಿರ್ಣಾಯಕರು, ಕ್ರೀಡಾಪಟುಗಳು ಇದ್ದರು.