ಜಿಲ್ಲೆಯಲ್ಲಿ ಎರಡು ಕಡೆ ಅಲ್ಪ ಸಂಖ್ಯಾತರ ಕಚೇರಿಗಳನ್ನು ತೆರೆಯಲು ಶಿಫಾರಸ್ಸು

ಕಾರವಾರ: ವಕ್ಪ್‌ ಬೋರ್ಡ್, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ಅಲ್ಪಸಂಖ್ಯಾತರ ನಿಗಮಗಳ ಕಚೇರಿಯನ್ನು ಶಿರಸಿಯಲ್ಲೂ ತೆರೆಯಲು ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಜೀಮ್ ಹೇಳಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಾರ್ವಜನಿಕ ಅಹವಾಲು ಸಭೆ, ಅಧಿಕಾರಿಗಳ ಸಭೆಯ ನಂತರ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಉತ್ತರ ಕನ್ನಡ ಜಿಲ್ಲೆ ದೊಡ್ಡದಾಗಿದೆ. ಸೌಲಭ್ಯ ಪಡೆಯಲು ಜನ ಓಡಾಡುವುದು ಕಷ್ಟ ಈ ಹಿನ್ನೆಲೆಯಲ್ಲಿ ಎರಡು ಕಚೇರಿ ತೆರೆಯುವುದು ಸೂಕ್ತ ಎಂದು ಯೋಜಿಸಿದ್ದು, ಜಿಲ್ಲಾಧಿಕಾರಿ ಅಭಿಪ್ರಾಯ ಪಡೆದು, ಎರಡು ಕಚೇರಿ ತೆರೆಯಲಾಗುವುದು ಎಂದರು.
ಜಿಲ್ಲೆಯಲ್ಲಿ 838 ವಕ್ಪ ಆಸ್ತಿಗಳಿವೆ. ಆದರೆ, ಅವುಗಳ ಸರ್ವೇ ಮಾಡಿ ಗಡಿ ಗುರುತಿಸುವ ಕೆಲಸವಾಗಿಲ್ಲ. ಅವುಗಳನ್ನು ಶೀಘ್ರ ಮಾಡುವಂತೆ ಜಿಲ್ಲಾಧಿಕಾರಿ ಅವರಿಗೆ ಸೂಚಿಸಲಾಗಿದೆ. ಮಾಡಿದಲ್ಲಿ ಆಸ್ತಿಗಳ ರಕ್ಷಣೆಗೆ ಅನುಕೂಲವಾಗಲಿದೆ ಈ ನಿಟ್ಟಿನಲ್ಲಿ ಕಂದಾಯ ಸಭೆಗಳಿಗೆ ವಕ್ಪ್‌ ಬೋರ್ಡ್ ಅಧಿಕಾರಿಗಳು ಹಾಜರಾಗಬೇಕು. ಜಿಲ್ಲೆಯಲ್ಲಿ ಖಬರ್‌ಸ್ಥಾನ ಮಂಜೂರು ಮಾಡುವಂತೆ, ಶಿರವಾಡ ಖಬರ್‌ಸ್ಥಾನಕ್ಕೆ ರಸ್ತೆ ನಿರ್ಮಾಣಕ್ಕೆ ಮನವಿ ಬಂದಿದೆ. ಅವುಗಳನ್ನು ಪರಿಗಣಿಸಿ ಶೀಘ್ರ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ ಎಂದರು.
ಉತ್ತರ ಕನ್ನಡದಲ್ಲಿ ಕಳೆದ ಏಳೆಂಟು ವರ್ಷಗಳಿಂದ ಯಾವುದೇ ಕೋಮು ಸಂಘರ್ಷ ಸಂಭವಿಸಿಲ್ಲ. ಇದು ಖುಷಿಯ ವಿಚಾರ. ಇದೇ ರೀತಿ ಕಾನೂನು ಸುವ್ಯವಸ್ಥೆ ಕಾಪಾಡುವಂತೆ ಪೊಲೀಸ್ ಇಲಾಖೆಗೆ ಸೂಚಿಸಿದ್ದೇನೆ. ಸೌಹಾರ್ದತೆ ಕಾಪಾಡುವಂತೆ ಸಮುದಾಯದವರಿಗೂ ವಿನಂತಿಸುತ್ತಿದ್ದೇನೆ ಎಂದರು.
ಅಲ್ಪಸಂಖ್ಯಾತರಿಗೆ ಸಿಗುವ ಸೌಲಭ್ಯಗಳ ಬಗ್ಗೆ ಮೊಬೈಲ್‌ನಲ್ಲಿಯೇ ಅರ್ಜಿ ಸಲ್ಲಿಸುವ ವ್ಯವಸ್ಥೆ ಮಾಡಬೇಕು ಹಾಗೂ ಯೋಜನೆ ಪ್ರಯೋಜನ ಪಡೆಯಲು ಇರುವ ನಿಯಮಾವಳಿಗಳನ್ನು ಸಡಿಲ ಮಾಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಲು ನಿರ್ಧರಿಸಲಾಗಿದೆ ಎಂದರು.