ನಾಲ್ಕು ತಿಂಗಳ ವೇತನ ಪಾವತಿ ಬಾಕಿ: ಮತ್ತೆ ಡಯಾಲಿಸಿಸ್‌ ನೌಕರರ ಪ್ರತಿಭಟನೆ

ಕಾರವಾರ:ವೇತನ ಪಾವತಿಗೆ ಆಗ್ರಹಿಸಿ ಜಿಲ್ಲೆಯ ಡಯಾಲಿಸಿಸ್ ಘಟಕಗಳ ಸಿಬ್ಬಂದಿ ಮತ್ತೆ ಅನಿರ್ದಿಷ್ಟಾವಧಿ ಪ್ರತಿಭಟನೆಗೆ ಮುಂದಾಗಿದ್ದು, ನ.30 ರಿಂದ ಡಯಾಲಿಸಿಸ್ ಸೇವೆಗಳಲ್ಲಿ ವ್ಯತ್ಯಯವಾಗಲಿದೆ.
ಜಿಲ್ಲೆಯ 11 ತಾಲೂಕು ಆಸ್ಪತ್ರೆಗಳ ಒಟ್ಟು 54 ಸ್ಟಾಪ್ ನರ್ಸ್, ತಂತ್ರಜ್ಞರು, ಸಹಾಯಕರು ಪ್ರತಿಭಟನೆಗೆ ಮುಂದಾಗಿದ್ದಾರೆ. ಅವರಿಗೆ ಕಳೆದ 4 ತಿಂಗಳಿಂದ ವೇತನ ಪಾವತಿಯಾಗಿಲ್ಲ. ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿರುವ 28 ಯಂತ್ರಗಳಲ್ಲಿ 300 ಕ್ಕೂ ಅದಿಕ ರೋಗಿಗಳು ನಿರಂತರವಾಗಿ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದು, ಅವರಿಗೆಲ್ಲ ತೊಂದರೆ ಉಂಟಾಗಲಿದೆ.
ಇದುವರೆಗೆ ಡಯಾಲಿಸಿಸ್ ಸಿಬ್ಬಂದಿಗೆ ಸಂಜೀವಿನಿ ಎಂಬ ಹೊರಗುತ್ತಿಗೆ ಕಂಪನಿಯ ಮೂಲಕ ವೇತನ ಪಾವತಿ ಮಾಡಲಾಗುತ್ತಿತ್ತು. ಕಳೆದ ತಿಂಗಳಿಂದ ಆ ಕಂಪನಿ ಬಿಟ್ಟು ನೇರವಾಗಿ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ವೇತನ ಪಾವತಿ ಮಾಡುವುದಾಗಿ ಆರೋಗ್ಯ ಇಲಾಖೆ ಹೇಳಿತ್ತು. ನೌಕರರಿಗೆ ಹಿಂದಿನ ಸಂಜೀವಿನಿ ಕಂಪನಿ 2 ತಿಂಗಳ ವೇತನ ಪಾವತಿ ಮಾಡುವುದು ಬಾಕಿ ಇದೆ. ಇನ್ನು ಎನ್‌ಎಚ್‌ಎಂ ಅಡಿ ಅಕ್ಟೋಬರ್ ಹಾಗೂ ನವೆಂಬರ್ ತಿಂಗಳ ವೇತನ ಪಾವತಿ ಮಾಡುವುದು ಬಾಕಿ ಇದೆ.

`ನಾವು ಜನರ ಜೀವ ಉಳಿಸುವ ಸಲುವಾಗಿ ದುಡಿಯುತ್ತೇವೆ. ರೋಗಿಗಳಿಗೆ ತೊಂದರೆ ಉಂಟಾಗಬಾರದು ಎಂದು ನಾವೂ ಸಾಕಷ್ಟು ದಿನ ತಡೆದುಕೊಂಡೆವು. ಆದರೆ, ಸರ್ಕಾರ ನಮ್ಮನ್ನು ನಿರ್ಲಕ್ಷಿಸುತ್ತಿದೆ. ಎನ್‌ಎಚ್‌ಎಂ ಅನುದಾನ ಬಿಡುಗಡೆಯಾದರೂ ಅಧಿಕಾರಿಗಳು ನಮಗೆ ವೇತನ ಪಾವತಿ ಮಾಡುತ್ತಿಲ್ಲ ಎಂಬ ಸುದ್ದಿ ಇದೆ. ಆದರೆ, ನಮಗೆ ಸರ್ಕಾರ ಕನಿಷ್ಠ ಸಕಾಲದಲ್ಲಿ ವೇತನವನ್ನೂ ಪಾವತಿಸುತ್ತಿಲ್ಲ. ಪಿಎಫ್ ಇಲ್ಲ. ಇಎಸ್‌ಐ ಇಲ್ಲ. ಸರ್ಕಾರದ ನಿಯಮಾವಳಿಯಂತೆ ಕನಿಷ್ಠ ವೇತನ ನೀಡುತ್ತಿಲ್ಲ. 13 ಸಾವಿರ ವೇತನ ನೀಡಲಾಗುತ್ತದೆ. ಅದನ್ನೂ ಮೂರು, ನಾಲ್ಕು ತಿಂಗಳು ನೀಡುವುದಿಲ್ಲ. ಸರ್ಕಾರದ ಈ ನಿರ್ಲಕ್ಷ್ಯದಿಂದ ಬೇಸತ್ತಿದ್ದೇವೆ ಎಂಬುದು ಡಯಾಲಿಸಿಸ್ ಸಿಬ್ಬಂದಿ ಗೋಳು.

ಕೆಲ ತಿಂಗಳ ಹಿಂದೆ ಪ್ರತಿಭಟನೆ ಮಾಡಲಾಗಿತ್ತು. ಆಗ ಹಿಂದಿನ ಕಂಪನಿಯ ಬಾಕಿ ವೇತನ ಪಾವತಿಸಲಾಯಿತು. ಮತ್ತು ಬಾಕಿ ವೇತನ ಪಾವತಿಸುವ ಭರವಸೆಯನ್ನು ಖುದ್ದು ಆರೋಗ್ಯ ಸಚಿವರೇ ನೀಡಿದ್ದರು. ಈಗ ನೋಡಿದರೆ ಭರವಸೆ ಹಾಗೇ ಉಳಿದಿದೆ ಎಂದರು.