ಅಂಕೋಲಾ: ತಾಲ್ಲೂಕಿನ ಭೂಮಿ ಕ್ರಿಯಾಶೀಲವಾದ ಭೂಮಿ. ಸಾಹಿತ್ಯಕ್ಕಾಗಿ, ಸ್ವಾತಂತ್ರ್ಯಕ್ಕಾಗಿ ದುಡಿದು ಕೊಡುಗೆ ನೀಡಿದ ಭೂಮಿ. ಇಲ್ಲಿ ಪ್ರತಿಭಾನ್ವಿತ ಸಾಹಿತಿಗಳನ್ನು ಕಾಣಬಹುದು ಎಂದು ಹಿರಿಯ ಸಾಹಿತಿ ಶ್ಯಾ.ಮಂ.ಕೃಷ್ಣರಾಯ ಹೇಳಿದರು.
ತಾಲ್ಲೂಕಿನ ನಾಡವರ ಸಭಾಭವನದಲ್ಲಿ ನಡೆದ ಅಂಕೋಲಾ ತಾಲ್ಲೂಕು 10ನೇ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಾಹಿತ್ಯ ಮನಸ್ಸಿನ ಉಮ್ಮಳದಿಂದ ಹುಟ್ಟುವ ಕ್ರಿಯೆ. ಇನ್ನೊಬ್ಬರ ನೋವಿಗೆ ಸ್ಪಂದನ ಸಾಹಿತಿಗಳಲ್ಲಿರಬೇಕು. ಸಮಾಜಮುಖಿ ಸ್ಪಂದನೆ ಇಲ್ಲದೆ ಇದ್ದಲ್ಲಿ ಸಾಹಿತ್ಯಕ್ಕೆ ಅರ್ಥವಿಲ್ಲ. ಆಶಯ,ಭಾವ ತುಂಬಿದ ಜೀವಕಳೆ ಇರುವ ಸಾಹಿತ್ಯ ರಚಿಸಿ. ಪ್ರಶಸ್ತಿಗಳಿಗಾಗಿ ಅಲ್ಲ. ಎಂದಿಗೂ ಬದುಕುವ ಮೌಲ್ಯಯುತ ಸಾಹಿತ್ಯ ರಚಿಸಿ.ಅದಕ್ಕೆ ಜನ ಗುರುತಿಸಿ ಬೆಲೆ ನೀಡುತ್ತಾರೆ ಎಂದು ಯುವ ಸಾಹಿತಿಗಳಿಗೆ ತಿಳಿಸಿದರು.
ಸಮ್ಮೇಳನಾಧ್ಯಕ್ಷ ನಾಗೇಶದೇವ ಅಂಕೋಲೆಕರ ಮಾತನಾಡಿ, ಸಾಹಿತ್ಯ ನಿಂತ ನೀರಲ್ಲ, ಸದಾ ಹರಿಯುವ ಶಾಲ್ಮಲೆ. ನಮಗೆ ಅರಿವಿಲ್ಲದೇ ಸಾಹಿತ್ಯ ನಮ್ಮನ್ನು ಪ್ರಭಾವಿಸುತ್ತದೆ. ತನ್ನೊಳಗಿನ ಅಂತಃಸತ್ವದಿಂದ ಮುಂದಿನ ತಲೆಮಾರುಗಳನ್ನು ಪ್ರಭಾವಿಸುವ ಮತ್ತು ಆ ಮೂಲಕ ಸಮಾಜದ ಮುಖ್ಯಧಾರೆಯೊಂದಿಗೆ ಸಂಭಂದ ಏರ್ಪಡಿಸುವ ಶಕ್ತಿ ಸಾಹಿತ್ಯಕ್ಕಿದೆ. ತಳ ಸಮುದಾಯದ ಬಂದಿರುವ ನನ್ನಂಥವರು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆ ಆಗಲು ಈ ದೇಶದ ಸಂವಿಧಾನ ಮೂಲ ಪ್ರೇರಣೆ ಎಂದರು.
ಆಶಯ ನುಡಿಗಳನ್ನು ವ್ಯಕ್ತಪಡಿಸಿದ ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ, ಜಿಲ್ಲೆಯಲ್ಲಿ ಅತಿ ಹೆಚ್ಚು ತಾಲ್ಲೂಕು ಸಮ್ಮೇಳನ ನಡೆಸಿದ ಗೌರವಕ್ಕೆ ಅಂಕೋಲಾ ತಾಲ್ಲೂಕು ಭಾಜನವಾಗಿದೆ. ಕಳೆದ ಎರಡು ವರ್ಷಗಳಿಂದ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಜಿಲ್ಲೆಯ ಮನೆ ಮನೆಗೆ ತಲುಪಿಸಿದ್ದೇವೆ. ಕೇವಲ ನಾಲ್ಕು ತಾಲ್ಲೂಕು ಸಮ್ಮೇಳನದ ಅನುದಾನ ಬಿಡುಗಡೆಯಾಗಿದ್ದು ಏಳು ತಾಲ್ಲೂಕುಗಳ ಅನುದಾನ ಬಿಡುಗಡೆಯಾಗಿಲ್ಲ ಎಂದರು.
ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಗೋಪಾಲಕೃಷ್ಣ ನಾಯಕ ಪ್ರಾಸ್ತಾವಿಕವಾಗಿ ಮಾತನಾಡಿ, ಐತಿಹಾಸಿಕ ಪರಂಪರೆಯ ರೈತ ಚಳುವಳಿಯ ನಾಡು ಅಂಕೋಲಾ. ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಪ್ರದೇಶ. ತಾಲ್ಲೂಕಿನ ಸಾಹಿತ್ಯ ಕೃಷಿಗೆ ಆಡಳಿತ ವ್ಯವಸ್ಥೆಯಿಂದ ಸೂಕ್ತ ಪ್ರಾಧ್ಯಾನ್ಯತೆ ದೊರೆತಿಲ್ಲ ಎಂದರು.
ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಜಾರ್ಜ್ ಫರ್ನಾಂಡಿಸ್, ಹಿರಿಯ ಸಾಹಿತಿಗಳಾದ ಶಾಂತರಾಮ ನಾಯಕ, ನಾಗೇಂದ್ರ ತೊರ್ಕೆ, ರಾಮಕೃಷ್ಣ ಗುಂದಿ, ಮೋಹನ ಹಬ್ಬು, ವಿಠ್ಠಲ ಗಾಂವಕರ ಮತ್ತು ವಿವಿಧ ತಾಲ್ಲೂಕುಗಳ ಕಸಾಪ ಘಟಕದ ಅಧ್ಯಕ್ಷರು ವೇದಿಕೆಯಲ್ಲಿದ್ದರು.
ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಳಲಕ್ಷ್ಮಿ ಪಾಟೀಲ್ ಸಾಹಿತ್ಯ ಸಮ್ಮೇಳನದ ದ್ವಾರಗಳನ್ನು ಉದ್ಘಾಟಿಸಿ, ಮುಂದಿನ ಸಾಹಿತ್ಯ ಸಮ್ಮೇಳನದಲ್ಲಿ ಮಹಿಳಾಗೋಷ್ಠಿಯನ್ನು ಆಯೋಜಿಸಿ ಎಂದು ಮನವಿ ಮಾಡಿದರು.
ಸಮ್ಮೇಳನದ ನಿಕಟಪೂರ್ವ ಅಧ್ಯಕ್ಷರಾದ ಶ್ರೀಮತಿ ಹೊನ್ನಮ್ಮ ನಾಯಕ ಸಮ್ಮೇಳನಾಧ್ಯಕ್ಷರಿಗೆ ಧ್ವಜ ಹಸ್ತಾಂತರಿಸಿದರು. ಹಿರಿಯ ಪತ್ರಕರ್ತ ಗಂಗಾಧರ ಹೀರೆಗುತ್ತಿ ಪುಸ್ತಕ ಮಳಿಗೆ ಉದ್ಘಾಟಿಸಿದರು. ಸ್ವಾಗತ ಸಮಿತಿಯ ಅಧ್ಯಕ್ಷ ಮಹೇಶ ಗೋಳಿಕಟ್ಟೆ ಸ್ವಾಗತಿಸಿದರು. ಶ್ಯಾಮಸುಂದರ ಗೌಡ ಸಂಪಾದಕೀಯದ ‘ಅಂಕೋಲೆ ಒಡಲಾಳ’ ಎನ್ನುವ ಸ್ಮರಣ ಸಂಚಿಕೆಯನ್ನು ಸಾಂಕೇತಿಕವಾಗಿ ಲೋಕಾರ್ಪಣೆ ಮಾಡಲಾಯಿತು.
ವಿದ್ಯಾರ್ಥಿಗಳು ನಾಡಗೀತೆ ಪ್ರಸ್ತುತ ಪಡಿಸಿದರು. ಪ್ರಶಾಂತ ನಾಯ್ಕ ಅತಿಥಿಗಳನ್ನು, ಪುಷ್ಪಾ ನಾಯ್ಕ ಸಮ್ಮೇಳನದ ಅಧ್ಯಕ್ಷರನ್ನು ಪರಿಚಯಿಸಿದರು. ಪತ್ರಕರ್ತ ಸುಭಾಸ್ ಕಾರೆಬೈಲ್ ಕಾರ್ಯಕ್ರಮ ನಿರೂಪಿಸಿದರು. ಖ್ಯಾತ ವಿಮರ್ಶಕ ಪ್ರೊ. ಜಿ ಎಚ್ ನಾಯಕ ವೇದಿಕೆಯಲ್ಲಿ ಕಾರ್ಯಕ್ರಮ ಜರುಗಿತು.