ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿನಿಗೆ ಸನ್ಮಾನ.

ಅಂಕೋಲಾ: ನಿರಂತರ ಪರಿಶ್ರಮ, ಆತ್ಮವಿಶ್ವಾಸ ಮತ್ತು ಗುರು ಹಿರಿಯರ ಮಾರ್ಗದರ್ಶನದಿಂದ ವಿದ್ಯಾರ್ಥಿಗಳು ಉನ್ನತ ಮಟ್ಟದ ಸಾಧನೆ ಮಾಡಲು ಸಾಧ್ಯವಿದೆ. ಸಾಧನೆಗೆ ಅಗತ್ಯವಾದ ಬೆಂಬಲವನ್ನು ನೀಡುವುದು ಸಮಾಜದ ಬದ್ಧತೆಯಾಗಿದೆ ಎಂದು ಜಿಲ್ಲಾ ಹರಿಕಂತ್ರ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ಮಾರುತಿ ಹರಿಕಂತ್ರ ಹೇಳಿದರು.
ಪಟ್ಟಣದ ಕಲ್ಪವೃಕ್ಷ ತರಬೇತಿ ಕೇಂದ್ರದ ಆವರಣದಲ್ಲಿ ಶುಕ್ರವಾರ ನಡೆದ ಅಂಕೋಲಾ ತಾಲ್ಲೂಕು ಕಾರ್ಯಕಾರಿ ಸಮಿತಿಯ ರಚನೆ ಹಾಗೂ ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿನಿಗೆ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕುಮಾರಿ ಜನ್ಮೀತಾ ಕಾಶೀನಾಥ ಹರಿಕಂತ್ರ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗುವ ಮೂಲಕ ಸಮಾಜದ ಮತ್ತು ತಾಲ್ಲೂಕಿನ ಕೀರ್ತಿಯನ್ನು ಹೆಚ್ಚಿಸಿದ್ದಾಳೆ. ಇಂತಹ ಪ್ರತಿಭೆಗಳನ್ನು ಪ್ರೋತ್ಸಾಹಿಸುವುದು ಸಂಘದ ಕರ್ತವ್ಯವಾಗಿರುತ್ತದೆ. ಹಾಗಾಗಿ ಮುಂದಿನ ವರ್ಷ ಜನ್ಮೀತಾಳ ಹತ್ತನೇ ತರಗತಿಯ ವಿದ್ಯಾಭ್ಯಾಸಕ್ಕೆ ಅಗತ್ಯವಾದ ಪಠ್ಯಪುಸ್ತಕ ಮತ್ತು ಅಧ್ಯಯನ ಸಾಮಗ್ರಿಗಳನ್ನು ಸಂಘದಿಂದಲೇ ನೀಡಲಾಗುವುದು ಎಂದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಸಂಘದ ಗೌರವಾಧ್ಯಕ್ಷ ದಿಲೀಪ್ ಅರ್ಗೇಕರ್, ಯಾವುದೇ ಸಮಾಜದ ಬೆಳವಣಿಗೆಯಲ್ಲಿ ಸಂಘಟನೆಯ ಪಾತ್ರ ಬಹುಮುಖ್ಯವಾಗಿರುತ್ತದೆ. ಎಲ್ಲರೂ ಒಂದಾಗಿ ಸಂಘದ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳೋಣ. ಶೈಕ್ಷಣಿಕ, ಆರ್ಥಿಕ ಮತ್ತು ರಾಜಕೀಯವಾಗಿ ಹರಿಕಂತ್ರ ಸಮಾಜ ಬೆಳವಣಿಗೆ ಹೊಂದಲು ಶ್ರಮಿಸೋಣ ಎಂದರು.
ಸಭೆಯಲ್ಲಿ ಉಪಸ್ಥಿತರಿದ್ದ ಜಿಲ್ಲಾ ಮೀನುಗಾರರ ರಕ್ಷಣಾ ವೇದಿಕೆ ಅಧ್ಯಕ್ಷ ಹರಿಹರ ಹರಿಕಂತ್ರ ಮಾತನಾಡಿ, ನೂತನ ಸಂಘದ ಕಾರ್ಯ ಚಟುವಟಿಕೆಗಳು ವಿಶಿಷ್ಟವಾಗಿ ಮತ್ತು ರಚನಾತ್ಮಕವಾಗಿ ಸಾಗುತ್ತಿದೆ. ನಾಯಕತ್ವದ ಗುಣಗಳನ್ನು ಬೆಳಸಿ ಸಮಾಜದ ಶ್ರೇಯೋಭಿವೃದ್ಧಿಗೆ ಕೊಡುಗೆ ನೀಡುವಂತಾಗಲಿ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ವಿದ್ಯಾರ್ಥಿನಿ ಜನ್ಮಿತಾ ಮಾತನಾಡಿ, ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಲು ವಿಜ್ಞಾನ ಶಿಕ್ಷಕ ಸುಧೀರ್ ನಾಯಕ ಮುಖ್ಯ ಕಾರಣೀಕರ್ತರು. ಜಿಲ್ಲೆಯ ಕರಾವಳಿ ಭಾಗಗಳಲ್ಲಿ ನಶಿಸಿಹೋಗಿರುವ ಕಗ್ಗ ಬತ್ತದ ಕುರಿತು ಪ್ರಾಯೋಗಿಕ ಸಂಶೋಧನೆ ಕೈಗೊಂಡು ಪ್ರಾತ್ಯಕ್ಷಿತೆ ಮಂಡನೆ ಮಾಡಿದ್ದೇವೆ ಎಂದರು.
ಸಂಘದ ಜಿಲ್ಲಾಧ್ಯಕ್ಷ ರೋಷನ್ ಹರಿಕಂತ್ರ ಸ್ವಾಗತಿಸಿದರು. ಅಂಕೋಲಾ ತಾಲ್ಲೂಕು ಅಧ್ಯಕ್ಷ ಮಹೇಶ ದುರ್ಗೇಕರ ವಂದಿಸಿದರು. ಹಿರಿಯರಾದ ಸಂಜೀವ್ ಬಲೇಗಾರ, ನವೀನ್ ಹರಿಕಂತ್ರ ಪ್ರವೀಣ ತಾಂಡೇಲ, ಭರತ್ ಖಾರ್ವಿ, ನಂದೀಶ್ ಮಾಜಾಳಿಕರ್ ಮತ್ತು ಇತರರು ಇದ್ದರು.