ಅಂಕೋಲಾ: ಕರಾವಳಿ ಭಾಗದಲ್ಲಿ ಮತ್ಸೋದ್ಯಮ ಪ್ರಮುಖ ಅಂಗ. ಅದು ಕೇವಲ ಮೀನುಗಾರರ ಬದುಕನ್ನು ಕುರಿತಾದದ್ದಲ್ಲ. ಮೀನು ಆಹಾರ ತಿನ್ನುವವರು ಕಡಲತೀರಗಳ ರಕ್ಷಣೆಗೆ ಸಮಾನ ಹೊಣೆಗಾರರು ಎಂದು ಪತ್ರಕರ್ತ ಪ್ರಮೋದ ಹರಿಕಂತ್ರ ಹೇಳಿದರು
ತಾಲ್ಲೂಕಿನ ನಾಡವರ ಸಭಾಭವನದ ಪ್ರೊ ಜಿ ಎಚ್ ನಾಯಕ ವೇದಿಕೆಯಲ್ಲಿ ನಡೆದ ಅಂಕೋಲಾ ತಾಲ್ಲೂಕು 10ನೇ ಸಾಹಿತ್ಯ ಸಮ್ಮೇಳನದ ವಿಚಾರ ಗೋಷ್ಠಿಯಲ್ಲಿ ಪಾಲ್ಗೊಂಡು, ಅಂಕೋಲಾ ತಾಲ್ಲೂಕಿನ ಮೀನುಗಾರಿಕೆ ಅವಕಾಶ ಮತ್ತು ಸವಾಲುಗಳು ಎನ್ನುವ ವಿಷಯದ ಕುರಿತು ಅವರು ಮಾತನಾಡಿದರು. ತಾಲ್ಲೂಕಿನಲ್ಲಿ ಎಲ್ಲಾ ಸಮುದಾಯದವರು ಮೀನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ತಾಲ್ಲೂಕಿನಲ್ಲಿ ಮೀನುಗಾರಿಕೆಗೆ ವಿಫುಲ ಅವಕಾಶವಿದೆ.ಇಲ್ಲಿನ ಮತ್ಸ್ಯ ಖಾದ್ಯಗಳಲ್ಲಿ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಹೊಂದಿದೆ.
ಆದರೆ ಸೌಲಭ್ಯಗಳ ಕೊರತೆಯಿಂದ ಮೀನು ಇಳುವರಿ ಮಾತ್ರ ಕಡಿಮೆಯಾಗಿದೆ ಎಂದರು.
ಅಂಕೋಲಾ ತಾಲ್ಲೂಕಿನ ಪ್ರಸ್ತಾವಿತ ಬೃಹತ್ ಯೋಜನೆಗಳು ಮತ್ತು ಸ್ಥಳೀಯರಿಗೆ ಉದ್ಯೋಗ ಎನ್ನುವ ವಿಷಯದ ಕುರಿತು ಮಾತನಾಡಿದ ಲೇಖಕಿ ಅಕ್ಷತಾ ಕೃಷ್ಣಮೂರ್ತಿ, ತಾಲ್ಲೂಕಿಗೆ ಕೈಗಾರಿಕೆಗಳು ಬರಬೇಕಾದರೆ ಮೂಲ ಸೌಕರ್ಯಗಳ ಅವಶ್ಯಕತೆಯಿದೆ. ಹೂಡಿಕೆಯನ್ನು ಆಕರ್ಷಿಸಿ ಬಂಡವಾಳ ತರುವ ಸಾರಿಗೆ ಸಂಪರ್ಕ ವ್ಯವಸ್ಥೆ ಬೆಳವಣಿಗೆ ಹೊಂದಬೇಕು. ಎಂಟು ದಿಕ್ಕುಗಳು ಎಂಟು ಸಂಸ್ಕೃತಿಯನ್ನು ಹೊಂದಿರುವ ಅಂಕೋಲಾ ತಾಲ್ಲೂಕಿಗೆ ಎಂಟು ಉದ್ಯೋಗಗಳು ಈಗಾಗಲೇ ಇದ್ದು, ಹೊರಗಿನ ಹೊಸ ಉದ್ಯೋಗವನ್ನು ಅಪೇಕ್ಷೆ ಹೊಂದುವ ಬದಲು ಇರುವುದನ್ನು ಅಭಿವೃದ್ಧಿಪಡಿಸುವುದು ಉತ್ತಮ ಎಂದರು.
ಸಮ್ಮೇಳನದ ಅಧ್ಯಕ್ಷರಾದ ನಾಗೇಶದೇವ ಅಂಕೊಲೇಕರ ವೇದಿಕೆಯಲ್ಲಿದ್ದರು.ನಿವೃತ್ತ ಪ್ರಾಚಾರ್ಯ ರವೀಂದ್ರ ಕೇಣಿ ಆಶಯ ನುಡಿ ವ್ಯಕ್ತಪಡಿಸಿದರು. ನಿವೃತ್ತ ಉಪನ್ಯಾಸಕ ಶ್ರೀಧರ ನಾಯಕ ಅಧ್ಯಕ್ಷತೆ ವಹಿಸಿದ್ದರು. ಎನ್ ವಿ ರಾಥೋಡ್ ನಿರ್ವಹಿಸಿದರು. ರಾಜೀವ ನಾಯಕ ಸ್ವಾಗತಿಸಿದರು. ಎಂ.ಬಿ ಆಗೇರ ವಂದಿಸಿದರು.