ಜಮೀನು ಬೇಲಿ ವಿವಾದ ಹಲ್ಲೆ; ದೂರು ಪ್ರತಿ ದೂರು ದಾಖಲು.

ಅಂಕೋಲಾ: ಜಮೀನಿನ ದಾರಿಗೆ ಸಂಭಂದಿಸಿದಂತೆ ಎರಡು ಗುಂಪುಗಳ ನಡುವೆ ಆರೋಪ ಮತ್ತು ಪ್ರತ್ಯಾರೋಪಗಳು ನಡೆದು ಹಲ್ಲೆ ನಡೆಸಿದ ಆರೋಪದ ಮೇಲೆ ಪರಸ್ಪರ ದೂರು ಪ್ರತಿದೂರು ದಾಖಲಾಗಿದೆ.
ಸ್ವಂತ ಜಮೀನನಲ್ಲಿ ಕೆಲಸ ಮಾಡುತ್ತಿದ್ದ ಜೆಸಿಬಿ ಚಾಲಕನಿಗೆ ಬೆದರಿಕೆ ಹಾಕಿದ್ದನ್ನು ಪ್ರಶ್ನಿಸಿದ್ದಕ್ಕೆ ಹಲ್ಲೆ ಮಾಡಿದ ಆರೋಪದಡಿಯಲ್ಲಿ ಇಬ್ಬರೂ ಮಹಿಳೆಯರು ಸೇರಿದಂತೆ ಎಂಟು ಜನರ ವಿರುದ್ಧ ದೂರು ದಾಖಲಾಗಿದೆ. ತಾಲ್ಲೂಕಿನ ಹಳವಳ್ಳಿಯ ಮಳಲಗಾಂವನ ಮಹೇಶ ಪಟಗಾರ(33) ದೂರು ನೀಡಿದ್ದಾರೆ. ಸ್ಥಳೀಯರಾದ ಸಂತೋಷ ವಿಶ್ವೇಶ್ವರ ಭಟ್, ಸುಬ್ರಾಯ ವೆಂಕಟರಮಣ ಭಟ್, ಸುಬ್ರಾಯ ಭಟ್ ಕಾನೆಮೂಲೆ, ಲಲಿತಾ ವೆಂಕಟರಮಣ ಭಟ್, ಶ್ರೀಕಾಂತ ಭಟ್, ವಿನಾಯಕ ನಾರಾಯಣ ಭಟ್, ಸಂತೋಷ ಸಿದ್ದಿ, ಮಂಜುಳಾ ಸಿದ್ದಿ ಎನ್ನುವವರ ಮೇಲೆ ದೂರು ದಾಖಲಾಗಿದೆ.


ಮಳಲಗಾಂವನ ಸ್ವಂತ ಜಮೀನನಲ್ಲಿ ಓಡಾಡದೇ ಸಾರ್ವಜನಿಕ ರಸ್ತೆಯಲ್ಲಿ ಸಂಚರಿಸುವಂತೆ ತಿಳಿಸಿದ್ದಕ್ಕೆ ಜೀವ ಬೆದರಿಕೆ ಹಾಕಿದ್ದರಿಂದ ನ್ಯಾಯಾಲಯದ ದಾವೆ ಹೂಡಲಾಗಿತ್ತು. ಫೆ.6ರಂದು ಜಮೀನಿನಲ್ಲಿ ಜೆಸಿಬಿ ಮೂಲಕ ಕೆಲಸ ಮಾಡುತ್ತಿದ್ದಾಗ ಆರೋಪಿಗಳು ಚಾಲಕನಿಗೆ ಜೀವ ಬೆದರಿಕೆ ಹಾಕಿದ್ದಾರೆ. ಇದನ್ನು ಪ್ರಶ್ನೆ ಮಾಡಿದ್ದಕ್ಕೆ ತಮ್ಮ ಕುಟುಂಬದ ಈರ್ವರು ಮಹಿಳೆಯರು ಸೇರಿದಂತೆ ಐದು ಜನ ಕುಟುಂಬಸ್ಥರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಮಹೇಶ ಪಟಗಾರ ದೂರಿದ್ದಾರೆ.
ಇದೇ ವಿಷಯಕ್ಕೆ ಸಂಭಂದಿಸಿದಂತೆ ರಸ್ತೆ ನಾಶ ಮಾಡದಂತೆ ತಿಳಿಸಿದ್ದಕ್ಕೆ ಹಲ್ಲೆ ಮಾಡಲಾಗಿದೆ ಎಂದು ಹಳವಳ್ಳಿಯ ಮಳಲಗಾಂವನ ಸಂತೋಷ ವಿಶ್ವೇಶ್ವರ ಭಟ್ ಇನ್ನೊಂದು ದೂರು ದಾಖಲಿಸಿದ್ದಾರೆ. ನಾರಾಯಣ ಮಾದೇವ ಪಟಗಾರ, ಮಹೇಶ ನಾರಾಯಣ ಪಟಗಾರ, ಪ್ರಕಾಶ ನಾರಾಯಣ ಪಟಗಾರ, ಪ್ರೇಮ ನಾರಾಯಣ ಪಟಗಾರ, ಪ್ರಕಾಶ ಪಟಗಾರ ಮತ್ತು ಮಹೇಶ ಪಟಗಾರರ ಪತ್ನಿಯರ ಮೇಲೆ ದೂರು ದಾಖಲಾಗಿದೆ. ನ್ಯಾಯಾಲಯದ ನಿರ್ಣಯದಂತೆ ಯಥಾಸ್ಥಿತಿಯನ್ನು ಕಾಪಾಡಿಕೊಂಡು ರಸ್ತೆ ನಾಶ ಮಾಡದಂತೆ ತಿಳಿಸಲು ಹೋದಾಗ ಇಬ್ಬರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಸಂತೋಷ ದೂರು ನೀಡಿದ್ದಾರೆ.