ಚಿಕಿತ್ಸೆ ಫಲಕಾರಿಯಾಗದೇ 4 ತಿಂಗಳ ಬಳಿಕ ಸಾವನ್ನಪ್ಪಿದ ಹೊನ್ನಾವರದ ಉರಗರಕ್ಷಕ ಅಬುತಲಾ

ಹೊನ್ನಾವರ : ದಶಕಗಳಿಂದಲೂ ಹೊನ್ನಾವರ ತಾಲೂಕಿನ ಜನರನ್ನು ಅಪಾಯಕಾರಿ ಹಾವಿನಿಂದ ರಕ್ಷಿಸುತ್ತಾ, ಹಾವನ್ನು ರಕ್ಷಿಸಿ ಕಾಡಿಗೆ ಬಿಡುತ್ತಿದ್ದ ಹೊನ್ನಾವರದ ಉರಗ ಪ್ರೇಮಿ ಅಬುತಲಾ, ಚಿಕಿತ್ಸೆ ಫಲಕಾರಿಯಾಗದೇ ನಾಲ್ಕು ತಿಂಗಳ ಬಳಿಕ ಸಾವನ್ನಪ್ಪಿದ್ದಾರೆ…

ನಾಲ್ಕು ತಿಂಗಳ ಹಿಂದೆ ಹೊನ್ನಾವರ ತಾಲೂಕಿನ ಜನಕಡ್ಕಲ್‌ನಲ್ಲಿ ಮನೆಯೊಂದಕ್ಕೆ ನುಗ್ಗಿದ ನಾಗರಹಾವೊಂದನ್ನು ಸೆರೆಹಿಡಿಯವಾಗ ಅಬುತಲಾಗೆ ಕಚ್ಚಿತ್ತು.. ಬಲೆಯಲ್ಲಿ ಸಿಲುಕಿದ್ದ ನಾಗರಹಾವನ್ನು ಬಿಡಿಸುವಾಗ ಈ ಘಟನೆ ನಡೆದಿತ್ತು. ಆದ್ರೂ ಎದೆಗುಂದದೇ ಅಬುತಲಾ ಹಾವು ಹಿಡಿದಿದ್ರು. ಬಳಿಕ ಅಸ್ವಸ್ಥಗೊಂಡಿದ್ರು..

ಕೂಡಲೇ ಅಬುತಲಾ ಅವರನ್ನು ತಾಲೂಕಾಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ನೆರೆಯ ಜಿಲ್ಲೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ನಾನಾ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಕೊನೆಗೆ ಚಿಕಿತ್ಸೆ ಫಲಕಾರಿಯಾಗದೇ ಅಬು ತಲಾ ಸಾವನ್ನಪ್ಪಿದ್ದಾರೆ…

ಹೊನ್ನಾವರದ ಗಾಂಧಿನಗರದ ನಿವಾಸಿಯಾಗಿರುವ ಅಬುತಲಾ ವೃತ್ತಿಯಲ್ಲಿ ರಿಕ್ಷಾ ಚಾಲಕನಾಗಿದ್ದು, ಯಾವುದೇ ಹೊತ್ತಿನಲ್ಲಿ ಹಾವು ಬಂದ ಕರೆಬಂದ್ರು ಸ್ಥಳಕ್ಕೆ ದಾವಿಸುತ್ತಿದ್ರು. ಕಾಳಿಂಗ ಸರ್ಪಗಳನ್ನು ಹಿಡಿದರೂ ಕೂಡ ಹಣ ಪಡೆಯುತ್ತಿರಲಿಲ್ಲ. ಆದ್ರೀಗ ಅಬುತಲಾ ನೆನಪಿನಂಗಳಕ್ಕೆ ಜಾರಿದ್ದಾರೆ. ಆದ್ರೆ ಅಬುತಲಾರ ಇಬ್ಬರು ಪುಟ್ಟಮಕ್ಕಳು, ಪತ್ನಿಗೆ ದಿಕ್ಕೇ ತೋಚದಂತಾಗಿದೆ. ನಾನಾ ಆಸ್ಪತ್ರೆಗಳನ್ನು ಸುತ್ತಿದ್ದ ಈ ಬಡ ಕುಟುಂಬ, ಅಬುತಲಾರನ್ನು ಉಳಿಸಿಕೊಳ್ಳಲು ಸಾಕಷ್ಟು ಹಣ ಖರ್ಚು ಮಾಡಿದೆ. ಹಣ ನೀರಿನಂತೆ ಖರ್ಚಾದ್ರೂ ಅಬುತಲಾ ಬದುಕುಳಿಯಲಿಲ್ಲ.. ಹೀಗಾಗಿ ಈ ಬಡ ಕುಟುಂಬಕ್ಕೆ ಇಂಥ ಕಷ್ಟದ ಪರಿಸ್ಥಿತಿಯಲ್ಲಿ ವಿಶಾಲ ಹೃದಯಿಗಳ ನೆರವಿನ ಅಗತ್ಯವಿದೆ..