ಬಿಜೆಪಿಗೆ ಮತ ಹಾಕಿದರೆ ರಾಮನಿಗೆ ನೀಡಿದಂತೆ: ಲೋಕಸಭಾ ಟಿಕೆಟ್ ಸಿಗುವ ವಿಶ್ವಾಸದಲ್ಲಿ ಮಾಜಿ ಸ್ಪೀಕರ್​ ಕಾಗೇರಿ ಹೇಳಿಕೆ

ಕಾರವಾರ, ಫೆಬ್ರವರಿ: ಬಿಜೆಪಿ ನಾಯಕ, ವಿಧಾನಸಭೆಯ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಇದೀಗ ಲೋಕಸಭಾ ಚುನಾವಣೆಗೆ ಉತ್ತರ ಕನ್ನಡ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ನಿರೀಕ್ಷೆಯಲ್ಲಿದ್ದಾರೆ. ಟಿಕೆಟ್ ಸಿಗುವ ವಿಶ್ವಾಸದಲ್ಲಿ ಚುನಾವಣೆ ಆರಂಭಕ್ಕೂ ಮುನ್ನ ರಾಮನ ಹೆಸರಿನಲ್ಲಿ ಪ್ರಚಾರ ಆರಂಭಿಸಿರುವ ಕಾಗೇರಿ, ಬಿಜೆಪಿಗೆ ನೀವು ಮತ ಹಾಕಿದರೆ ಅದು ರಾಮನಿಗೆ ಹಾಗೂ ಪ್ರಧಾನಿ ಮೋದಿಗೆ ಮತ ಹಾಕಿದಂತೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ ಎಂದು ಕಾರ್ಯರ್ತರಿಗೆ ಕರೆ ನೀಡಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದ ಕಚೇರಿಯಲ್ಲಿ ಮಾತನಾಡಿದ ಅವರು, ಕೆನರಾ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕಮಲದ ಹೂ. ವ್ಯಕ್ತಿ ಯಾರು ಎಂಬುದನ್ನು ವರಿಷ್ಠರು ಸೂಕ್ತ ಸಮಯದಲ್ಲಿ ಘೋಷಣೆ ಮಾಡುತ್ತಾರೆ. ಕಳೆದ ಬಾರಿಗಿಂತಲೂ ದಾಖಲೆ ಮತಗಳಿಂದ ಈ ಬಾರಿ ನಮ್ಮ ಬಿಜೆಪಿ ಗೆಲ್ಲಲಿದೆ. ಕಳೆದ ಬಾರಿ 4 ಲಕ್ಷ 80 ಸಾವಿರ ಮತಗಳ ಅಂತರದಿಂದ ಈ ಕ್ಷೇತ್ರದಲ್ಲಿ ಬಿಜೆಪಿ ಗೆದ್ದಿತ್ತು. ಈ ಬಾರಿ ಆ ದಾಖಲೆಯನ್ನು ಮುರಿದು ಇನ್ನೊಂದು ದಾಖಲೆಯನ್ನು ನಾವು ಸೃಷ್ಟಿಸುತ್ತೇವೆ ಎಂದು ಅವರು ಹೇಳಿದ್ದಾರೆ.

ನಮ್ಮ ಕಾರ್ಯಕರ್ತರು ಹಾಗೂ ಮತದಾರರಲ್ಲಿ ಮನವಿ ಮಾಡುತ್ತೇನೆ. ಬಿಜೆಪಿಗೆ ಮತ ಹಾಕಿದ್ರೆ ಅದು ರಾಮನಿಗೆ ಮತ ನೀಡಿದಂತೆ. ಬಿಜೆಪಿಗೆ ಮತ ಚಲಾಯಿಸಿದರೆ ಅದು ನರೇಂದ್ರ ಮೋದಿಗೆ ಮತ ಹಾಕಿದಂತೆ. ಜತೆಗೆ, ದೇಶದ ಐಕ್ಯತೆಗೆ ಮತ ನೀಡಿದಂತೆ. ಈ ಸಂದೇಶವನ್ನು ಜನರಿಗೆ ತಲುಪಿಸೋಣ, ಅವರಲ್ಲಿ ಜಾಗೃತಿ ಮೂಡಿಸೋಣ. ಎಲ್ಲರೂ ಮತದಾನ ಮಾಡುವಂತೆ ನಾವು ಮಾಡೋಣ ಎಂದು ಕಾರ್ಯರ್ತರು ಹಾಗೂ ಮುಖಂಡರಿಗೆ ಮನವಿ ಮಾಡಿದ್ದಾರೆ.

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಿಂದ ಬಿಜೆಪಿಯ ಅನಂತಕುಮಾರ್ ಹೆಗಡೆ ಹಾಲಿ ಸಂಸದರಾಗಿದ್ದಾರೆ. ಕೆಲವು ವರ್ಷಗಳಿಂದ ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಳ್ಳದಿದ್ದ ಹೆಗಡೆ ಇತ್ತೀಚೆಗೆ ಸಕ್ರಿಯರಾಗಿ ರಾಜಕೀಯ ಚಟುವಟಿಕೆಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕಳೆದ ಕೆಲವು ದಿನಗಳಿಂದ ಪಕ್ಷದ ಕಾರ್ಯಕರ್ತರ ಸಭೆಗಳಲ್ಲಿ ಭಾಗಿಯಾಗುತ್ತಿದ್ದು, ಈ ಬಾರಿಯೂ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ ಎನ್ನಲಾಗಿದೆ.

ಇತ್ತೀಚೆಗಷ್ಟೇ ಸಿಎಂ ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲಿ ಹೆಗಡೆ ವಾಗ್ದಾಳಿ ನಡೆಸಿದ್ದು ವಿವಾದಕ್ಕೆ ಗ್ರಾಸವಾಗಿತ್ತು. ಆ ನಂತರವೂ ಕೆಲವು ವಿವಾದಿತ ಹೇಳಿಕೆಗಳನ್ನು ನೀಡುವ ಮೂಲಕ ಅವರು ಸುದ್ದಿಯಲ್ಲಿದ್ದಾರೆ. ಈ ಮಧ್ಯೆ, ವಿಧಾನಸಭೆ ಚುನಾವಣೆ ಸೋಲಿನ ನಂತರ ತುಸು ಮೌನಕ್ಕೆ ಶರಣಾಗಿದ್ದ ಕಾಗೇರಿಯೂ ಇದೀಗ ರಾಜಕೀಯ ಚಟುವಟಿಕೆ ಬಿರುಸುಗೊಳಿಸಿರುವುದು ಉತ್ತರ ಕನ್ನಡ ರಾಜಕೀಯದಲ್ಲಿ ಕುತೂಹಲ ಮೂಡಿಸಿದೆ.