ಭರ್ತಿಯಾದ ವಸತಿಗೃಹಗಳು; ಹೊಸ ವರ್ಷದ ನೆಪಕ್ಕೆ ಕೃತಕ ಬೇಡಿಕೆ ಸೃಷ್ಟಿ

ಕಾರವಾರ: ಹೊಸ ವರ್ಷದ ಸಂಭ್ರಮಾಚರಣೆಗೆ ಎಲ್ಲರೂ ಸಿದ್ಧವಾಗಿದ್ದಾರೆ. ಸಂಭ್ರಮಾಚರಣೆಯ ಸಂಬಂಧ ಜಿಲ್ಲಾ ಕೇಂದ್ರವಾದ ಕಾರವಾರದಲ್ಲಿ ಸಾಮಾನ್ಯವಾಗಿ ಎಲ್ಲಾ ವಸತಿ ಗೃಹಗಳು ಭರ್ತಿಯಾಗಿವೆ. ಕೆಲವು ವಸತಿ ಗೃಹದ ಮಾಲೀಕರು ಲಾಭದ ಆಸೆಗೆ ಕೃತಕವಾಗಿ ಬೇಡಿಕೆ ಸೃಷ್ಟಿಸಲು ರೂಮ್ ಗಳು ಖಾಲಿಯಾಗಿವೆ ಎಂದು ಹೇಳುತ್ತಿರುವುದು ಕಂಡು ಬರುತ್ತಿದೆ.

ಕಾರವಾರದ ಗಡಿಭಾಗದ ಗೋವಾ ರಾಜ್ಯದಲ್ಲಿ ಕ್ರಿಸ್ ಮಸ್ ಹಾಗೂ ಹೊಸ ವರ್ಷದ ಸಂಭ್ರಮಾಚರಣೆಗೆ ಹಲವರು ಆಗಮಿಸುತ್ತಾರೆ. ಗೋವಾದಲ್ಲಿ ಮದ್ಯೆ ಅಗ್ಗವಾದ್ರೂ ಆಹಾರ ಮತ್ತು ವಸತಿಗ್ರಹಗಳ ರೂಮ್ ಬಾಡಿಗೆ ದುಬಾರಿಯಾಗಿದೆ. ಹಾಗಾಗಿ ಕಾರವಾರದ ವಸತಿಗೃಹದಲ್ಲಿ ಬಾಡಿಗೆ ರೂಮ್ ಪಡೆದು ಗೋವಾಕ್ಕೆ ತೆರಳಿ ಮೋಜು ಮಸ್ತಿ ಮಾಡುತ್ತಾರೆ.

ಈ ವರ್ಷ ಸಾಲು ಸಾಲು ರಜೆ ಬಂದಿರುವ ಕಾರಣ ವಾರದ ಹಿಂದೆಯೇ ಜನರು ದಂಡು ಕಾರವಾರಕ್ಕೆ ಆಗಮಿಸಿದೆ. 23ರಂದು ನಾಲ್ಕನೇ ಶನಿವಾರ, 24ರಂದು ರವಿವಾರ 25ರಂದು ಸೋಮವಾರ ಕ್ರಿಸ್ ಮಸ್ ನಿಮಿತ್ತ, ಹೀಗೆ ಸಾಲು ಸಾಲು ರಜೆಗಳು ಬಂದಿವೆ. ಹಾಗೆಯೇ ಕಾರವಾರ ಕಡಲತೀರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಜರುಗುತ್ತಿದೆ. ಕ್ರಿಸ್ ಮಸ್ ಹಾಗೂ ಹೊಸ ವರ್ಷದ ಆಚರಣೆಯ ಹಿನ್ನಲೆ ಜನರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಬಹುತೇಕ ವಸತಿ ಗೃಹದ ಕೊಠಡಿಗಳು ಭರ್ತಿಯಾಗಿವೆ.

ಕೆಲವು ವಸತಿ ಗೃಹಗಳಲ್ಲಿ ಮಾತ್ರ ಮಾಲೀಕರು ಡಿ.31ರಂದು ಇನ್ನೂ ಹೆಚ್ಚಿನ ಬೇಡಿಕೆ ಸೃಷ್ಟಿಯಾಗುವ ಕಾರಣ ಕೊಠಡಿಗಳು ಖಾಲಿಯಾಗಿವೆ ಎಂದು ಖಯಾಲಿ ಮಾಡುತ್ತಿದ್ದಾರೆ. ಅನಿವಾರ್ಯ ಕಾರ್ಯದ ನಿಮಿತ್ತ ವಸತಿ ಗೃಹಗಳಲ್ಲಿ ಉಳಿಯಲು ಬಂದಿರುವವರಿಗೆ ರೂಮ್ ಸಿಗದೆ ಪರದಾಡುವಂತಾಗಿದೆ.