ಹೊನ್ನಾವರ ನಾಮಧಾರಿ ವಿದ್ಯಾರ್ಥಿ ನಿಲಯದ ಸಭಾಭವನದಲ್ಲಿ ನಾಮಧಾರಿ ಹಿತರಕ್ಷಣಾ ವೇದಿಕೆ ಉದ್ಘಾಟನಾ ಸಮಾರಂಭ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವಿಶೇಷ ಸಾಧಕರ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು…
ಕಾರ್ಯಕ್ರಮ ಉದ್ಘಾಟಿಸಿದ ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ಉಪನಿರ್ದೇಶಕ ಜಿ.ಎಸ್.ನಾಯ್ಕ, ನಮ್ಮ ಸಮಾಜದ ಮಕ್ಕಳಿಗೆ ಶೈಕ್ಷಣಿಕವಾಗಿ ಅವಕಾಶ ಮಾಡಿಕೊಟ್ಟರೆ ಸಮಾಜ ಬೆಳೆಯುತ್ತದೆ. ಸಮಾಜದ ಅಭಿವೃದ್ಧಿಗೆ ನಮ್ಮಿಂದಾಗುವ ಎಲ್ಲಾ ರೀತಿಯ ಸಹಾಯ, ಸಹಕಾರ ನೀಡಲು ನಾವೆಲ್ಲರೂ ಬದ್ದರಾಗಿದ್ದೇವೆ ಎಂದು ಹೇಳಿದ್ರು.
ಬಳಿಕ ನಿವೃತ್ತ ಪ್ರಾಂಶುಪಾಲೆ ಡಾ.ವಿಜಯಲಕ್ಷ್ಮೀ ನಾಯ್ಕ ಮಾತನಾಡಿ, ನನ್ನ ಶಿಷ್ಯ ವಿಕ್ರಮ ನಾಯ್ಕ ನಾಮಧಾರಿ ಹಿತರಕ್ಷಣಾ ವೇದಿಕೆ ಹುಟ್ಟು ಹಾಕಿ, ಈ ವೇದಿಕೆಯ ಅಧ್ಯಕ್ಷರಾಗಿರುವುದಕ್ಕೆ ಮೊಟ್ಟ ಮೊದಲು ಅವರಿಗೆ ಅಭಿನಂದಿಸುತ್ತೇನೆ. ಹಿತರಕ್ಷಣಾ ವೇದಿಕೆಯಡಿಯಲ್ಲಿ ಸಮಾಜದ ಆಗುಹೋಗುಗಳನ್ನು ಎತ್ತಿಹಿಡಿಯುವ ಕೆಲಸವಾಗಬೇಕು. ನಮ್ಮ ಸಮಾಜದಿಂದ ಏನು ಸೌಲಭ್ಯ ಕಲ್ಪಿಸಿಕೊಟ್ಟಿದ್ದಾರೆ ಎನ್ನುವುದನ್ನು ಅರಿತು ಅದನ್ನು ಸದ್ಬಳಕೆ ಮಾಡಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದ್ರು.
ಖ್ಯಾತ ರೇಡಿಯೋಲೋಜಿಸ್ಟ್ ಡಾ.ನಾಗರಾಜ ನಾಯ್ಕ ಮಾತನಾಡಿ ನಾಮಧಾರಿ ಹಿತರಕ್ಷಣಾ ವೇದಿಕೆ ಹುಟ್ಟುಹಾಕಿರುವುದು ನಮ್ಮೆಲ್ಲರ ಹೆಮ್ಮೆ ಎಂದರು. ಖ್ಯಾತ ಹೃದ್ರೋಗ ತಜ್ಞ ಡಾ.ಪ್ರಕಾಶ ನಾಯ್ಕ ಮಾತನಾಡಿ, ವೇದಿಕೆ ಕೇವಲ ನಮ್ಮ ಸಮಾಜದ ಹಿತ ಕಾಪಾಡುವುದರೊಟ್ಟಿಗೆ ಇತರ ಸಮಾಜದ ಹಿತವನ್ನು ಕಾಪಾಡುವಂತಾಗಬೇಕು ಎಂದು ಸಲಹೆ ನೀಡಿದ್ರು..
ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ಗಜಾನನ ಈಶ್ವರ ನಾಯ್ಕ ಮಾತನಾಡಿ, ನಾವೆಲ್ಲರೂ ಬ್ರಹ್ಮಶ್ರೀ ನಾರಾಯಣ ಗುರುಗಳ ಪರಂಪರೆಯಿಂದ ಬಂದವರು. ನಾಮಧಾರಿ ಪರಂಪರೆ ನಮಗೆಲ್ಲವನ್ನೂ ಕೊಟ್ಟಿದೆ. ಅದನ್ನು ನಾವು ಸದ್ವಿನಿಯೋಗ ಪಡಿಸಿಕೊಳ್ಳಬೇಕಿದೆ ಎಂದು ಹೇಳಿದ್ರು.
ನ್ಯಾಯವಾದಿ, ನಾಮಧಾರಿ ಹಿತರಕ್ಷಣಾ ವೇದಿಕೆ ಅಧ್ಯಕ್ಷ ವಿಕ್ರಮ ನಾಯ್ಕ ಮಾತನಾಡಿ, ನಾಮಧಾರಿ ಹಿತರಕ್ಷಣಾ ವೇದಿಕೆ ಯಾವುದೇ ರಾಜಕೀಯ ಪ್ರೇರಿತವಲ್ಲ. ಇದನ್ನು ರಾಜಕೀಯ ಲಾಭಕ್ಕೊಸ್ಕರ ಬಳಸಿಕೊಳ್ಳುವಂತಿಲ್ಲ. ವೇದಿಕೆ ಹೆಸರು ಬಳಸಿಕೊಂಡು ಒಂದು ಪಕ್ಷ ಅಥವಾ ವ್ಯಕ್ತಿಯ ಪರವಾಗಿ ಭಾಷಣ ಮಾಡುವಂತಿಲ್ಲ ಎಂದು ಹೇಳಿದ್ರು..
ನಂತರ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವಿಶೇಷ ಸಾಧಕರನ್ನು ಸನ್ಮಾನಿಸಲಾಯಿತು. ಸಭಾಕಾರ್ಯಕ್ರಮದ ನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.