ಜೋಳಿಗೆ ಅಭಿಯಾನದಡಿ ಲಾಟರಿ ಮಾರಾಟ; ದೂರು ದಾಖಲು

ಅಂಕೋಲಾ: ಜೋಳಿಗೆ ಅಭಿಯಾನದ ಹೆಸರಿನಲ್ಲಿ ಹಣ ಮಾಡುವ ಉದ್ದೇಶದಿಂದ ಲಾಟರಿಗಳನ್ನು ಪ್ರಿಂಟ್ ಮಾಡಿಸಿ, ಲಾಟರಿ ತಾಗಿದ್ದಲ್ಲಿ ಬಂಪರ್ ಬಹುಮಾನ ನೀಡುವುದಾಗಿ ಜನರಿಗೆ ವಂಚಿಸಿ ಹಣ ಪಡೆದು ಮೋಸ ಮಾಡುತ್ತಿದ್ದಾರೆ ಎನ್ನುವ ಆರೋಪದ ಮೇಲೆ ಇಲ್ಲಿನ ಸಂಗಾತಿ ರಂಗಭೂಮಿಯ ಕೆ ರಮೇಶ್ ಅವರ ಮೇಲೆ ದೂರು ದಾಖಲಾಗಿದೆ.
ವೃತ್ತಿಯಲ್ಲಿ ಚಾಲಕರಾಗಿರುವ ಅಂಕೋಲಾ ಹೊನ್ನಳ್ಳಿಯ ಬೀರು ಬೊಮ್ಮು ಗೌಡ ವಂಚನೆಯ ದೂರು ದಾಖಲಿಸಿದ್ದಾರೆ. ತಾಲ್ಲೂಕಿನ ಬೀಳೆಹೊಯ್ಗಿಯ ಕೆ. ರಮೇಶ್ ಅವರು ಪಟ್ಟಣದ ಕೆ ಎಲ್ ಇ ಕಾಲೇಜಿನ ಎದುರು ಶನಿವಾರ ಮಧ್ಯಾಹ್ನ ಸಂಗಾತಿ ರಂಗಭೂಮಿಯ ಜೋಳಿಗೆ ಅಭಿಯಾನದ ಕಾರ್ಯಕ್ರಮ ನಡೆಸಲು ಸಹಾಯವಾಗುತ್ತದೆ ಎಂದು ಲಕ್ಕಿ ಡಿಪ್ ಲಾಟರಿ ಇಡಲಾಗಿದೆ. ಒಂದು ಟಿಕೆಟ್ ಲಾಟರಿಯ ಮುಖಬೆಲೆ ₹ 100 ಇದೆ. ಅದನ್ನು ಖರೀದಿಸಿದರೆ ಕಾರ್ಯಕ್ರಮಕ್ಕೆ ಅನುಕೂಲ ಆಗುತ್ತದೆ ಎಂದು ದೂರುದಾರರಿಗೆ ತಿಳಿಸಿದ್ದಾರೆ.
ಒತ್ತಾಯ ಪೂರ್ವಕವಾಗಿ ₹ 400ನ 4 ಟಿಕೆಟ್ ನೀಡಿದ್ದಾರೆ. ನಂತರ ಬೀರು ಗೌಡ ಅವರಿಗೆ ಲಾಟರಿಯ ಮೇಲೆ ನಮೂದಿಸಿದ ಬಂಪರ್ ಬಹುಮಾನ ಗಮನಕ್ಕೆ ಬಂದಿದೆ.
ಬಲೇನೋ ಸಿಗ್ಮಾ ಕಾರು, ರಾಯಲ್ ಎನ್ ಫೀಲ್ಡ್ ಬೈಕ್, ಹೀರೋ ಬೈಕ್ ಇತ್ಯಾದಿ 25 ಬಹುಮಾನಗಳ ಯಾದಿಯನ್ನು ನೀಡಲಾಗಿದೆ. 2023ರ ಡಿಸೆಂಬರ್ 30 ರಂದು ಸ್ವಾತಂತ್ರ್ಯ ಸಂಗ್ರಾಮ ಭವನದಲ್ಲಿ ಫಲಿತಾಂಶ ಘೋಷಣೆ ಮಾಡಲಾಗುವುದು ಎಂದು ತಿಳಿಸಲಾಗಿತ್ತು. ಒತ್ತಾಯಪೂರ್ವಕವಾಗಿ ಲಾಟರಿ ಟಿಕೆಟ್ ಮಾರಾಟ ಮಾಡಿದ್ದಾರೆ. ಇದೇ ರೀತಿ ಹಲವರಿಗೆ ಟಿಕೆಟ್ ಮಾರಾಟ ಮಾಡಿದ್ದು, ಕಾನೂನು ಬಾಹಿರವಾಗಿರುವ ಕಾರಣ ದೂರು ದಾಖಲಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಿದೆ. ಪಿಎಸ್ಐ ಸುನಿಲ್ ಹುಲ್ಲೊಳ್ಳಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.