ಮುಖ್ಯಮಂತ್ರಿ ಸಿದ್ದರಾಮಯ್ಯಗೆ 10 ಸಾವಿರ ದಂಡ ವಿಧಿಸಿ, ನ್ಯಾಯಾಲಯದ ವಿಚಾರಣೆಗೆ ಹಾಜರಾಗುವಂತೆ ಹೈಕೋರ್ಟ್​ ಸೂಚನೆ

ಪ್ರತಿಭಟನೆ ವೇಳೆ ರಸ್ತೆ ತಡೆ ನಡೆಸಿ ಸಾರ್ವಜನಿಕರಿಗೆ ತೊಂದರೆ ನೀಡಿದ ಆರೋಪದ ಮೇಲೆ ತಮ್ಮ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ರದ್ದು ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಲ್ಲಿಸಿದ್ದ ಅರ್ಜಿಯನ್ನು ​​ಹೈಕೋರ್ಟ್ ವಜಾ ಮಾಡಿ, 10 ಸಾವಿರ ರೂ. ದಂಡ ವಿಧಿಸಿದೆ.

ಬೆಂಗಳೂರು, ಫೆಬ್ರವರಿ 06: ಪ್ರತಿಭಟನೆ ವೇಳೆ ರಸ್ತೆ ತಡೆ ನಡೆಸಿ ಸಾರ್ವಜನಿಕರಿಗೆ ತೊಂದರೆ ನೀಡಿದ ಆರೋಪದ ಮೇಲೆ ತಮ್ಮ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ರದ್ದು ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಸಲ್ಲಿಸಿದ್ದ ಅರ್ಜಿಯನ್ನು ​​ಹೈಕೋರ್ಟ್ (High Court)​ ವಜಾ ಮಾಡಿ, 10 ಸಾವಿರ ರೂ. ದಂಡ ವಿಧಿಸಿದೆ. ಹಾಗೆ ಮಾರ್ಚ್ 6 ರಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚನೆ ನೀಡಿದೆ.

ಮಾರ್ಚ್ 7 ರಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ​ ರಣದೀಪ್ ಸುರ್ಜೇವಾಲಾ, ಮಾರ್ಚ್ 11 ರಂದು ಸಚಿವ ಎಂ.ಬಿ.ಪಾಟೀಲ್, ಮಾರ್ಚ್ 15 ರಂದು ಸಚಿವ ರಾಮಲಿಂಗಾರೆಡ್ಡಿ ಅವರು ನ್ಯಾಯಾಲಯಕ್ಕೆ ಹಾಜರಾಗುವಂತೆ ನ್ಯಾ. ಕೃಷ್ಣ ಎಸ್ ದೀಕ್ಷಿತ್ ಅವರಿದ್ದ ಪೀಠ ಆದೇಶ ಹೊರಡಿಸಿದೆ.

ಅನಗತ್ಯವಾಗಿ ಪಿಎಸ್ಐ ಕು.ಜಹಿದಾ ಪ್ರತಿವಾದಿಯಾಗಿಸಿದ ಕಾರಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮತ್ತಿತರರಿಗೆ ನ್ಯಾಯಾಲಯ 10 ಸಾವಿರ ದಂಡ ವಿಧಿಸಿದೆ.

ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವವರೆಗೆ ಆದೇಶವನ್ನು ಅಮಾನತುಗೊಳಿಸುವಂತೆ ಸಿಎಂ ಸಿದ್ದರಾಮಯ್ಯ ಪರ ವಕೀಲರು ಹೈಕೋರ್ಟ್‌ಗೆ ಮನವಿ ಮಾಡಿದರು. ಆದರೆ, ನ್ಯಾಯಾಲಯ ಮನವಿಯನ್ನು ತಿರಸ್ಕರಿಸಿತು.

ಜನಪ್ರತಿನಿಧಿಗಳು ಕಾನೂನು ಪಾಲಿಸಿದರೆ ಜನ ಪಾಲಿಸುತ್ತಾರೆ. ಸಾರ್ವಜನಿಕ ರಸ್ತೆಯಲ್ಲಿ ಪ್ರತಿಭಟನೆ ನಡೆಸಿದರೆ ಜನರಿಗೆ ಕಷ್ಟವಾಗುತ್ತದೆ. ಸಿಟಿ ಲೈಫ್ ಈಸ್ ಟಾರ್ಚರ್,‌ ಪ್ರತಿಭಟನೆಗಳಿಂದ‌ ಜನರಿಗೆ ಮತ್ತಷ್ಟು ತೊಂದರೆಯಾಗುತ್ತದೆ. ಜನಪ್ರತಿನಿಧಿಯಾದ ಕಾರಣಕ್ಕೆ ರಸ್ತೆ ಅಡ್ಡಗಟ್ಟುವುದನ್ನು ಒಪ್ಪಲು ಸಾಧ್ಯವಿಲ್ಲ. ಜನ ನಾಯಕರಾದವರು ಮೊದಲು ಕಾನೂನು ಪಾಲಿಸಬೇಕು ಎಂದು ನ್ಯಾಯಾಲಯ ಚಾಟಿ ಬೀಸಿದೆ.