ವಿವಿಧ ಬೇಡಿಕೆಗೆ ಆಗ್ರಹಿಸಿ ಪ್ರತಿಭಟನೆ: ಆಡಳಿತ ವ್ಯವಸ್ಥೆಗೆ ಎಚ್ಚರಿಕೆ ನೀಡಿದ ಗ್ರಾಮಸ್ಥರು

ಅಂಕೋಲಾ: ತಾಲ್ಲೂಕಿನ ಅಲಗೇರಿ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಐ ಆರ್ ಬಿಯಿಂದ ರಸ್ತೆ ಡಿವೈಡರ್ ಮತ್ತು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳ ನಿರ್ಮಾಣ ಹಾಗೂ ತಾಲ್ಲೂಕಿನ ಸರ್ಕಾರಿ ತಜ್ಞ ಪ್ರಸೂತಿ ವೈದ್ಯರ ನೇಮಕ ಮಾಡುವಂತೆ ಆಗ್ರಹಿಸಿ ಸೋಮವಾರ ತಾಲ್ಲೂಕಿನ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಇಲ್ಲಿನ ಅಲಗೇರಿ,ಬಡಗೇರಿ, ಕಂತ್ರಿ ಮತ್ತು ಬೆರಡೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಕೆಲವರು ಅರೆಬೆತ್ತಲೆಯಾಗಿ ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಮೇಲಿನ ಬೇಡಿಕೆಗಳಿಗೆ ಸಂಬಂಧಿಸಿದಂತೆ ಹಲವು ಬಾರಿ ಮನವಿ ನೀಡಲಾಗಿದೆ. ರಸ್ತೆ ಡಿವೈಡರ್ ಇಲ್ಲದೆ ಇರುವುದರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಗಳಾಗಿ ಜನರು ಸಾವನ್ನಪ್ಪುತ್ತಿದ್ದಾರೆ. ಅವರ್ಸಾದಿಂದ ಬಾಳೆಗುಳಿ ಕ್ರಾಸ್‌ವರೆಗೆ ಬಹುತೇಕ ಅಪಘಾತಗಳು ಸಂಭವಿಸುತ್ತಿದ್ದು ಕಳೆದ ಒಂದು ತಿಂಗಳಲ್ಲಿ 8ಕ್ಕೂ ಹೆಚ್ಚು ಅಪಘಾತಗಳು ನಡೆದಿವೆ. ಆದ್ದರಿಂದ ಆದಷ್ಟು ಬೇಗ ಡಿವೈಡರ್ ನಿರ್ಮಿಸಿ ಮುಂಬರುವ ಅನಾಹುತಗಳನ್ನಾದರು ತಡೆಯಬೇಕು. ಸುಸಜ್ಜಿತ ಆಸ್ಪತ್ರೆ ಇಲ್ಲದಿರುವುದು ಇದಕ್ಕೆ ಇನ್ನೊಂದು ಕಾರಣವು ಹೌದು.
ಅಪಘಾತವಾದ ನಂತರ ಹೆಚ್ಚಿನ ಚಿಕಿತ್ಸೆ ನೀಡಲು ಜಿಲ್ಲೆಯಲ್ಲಿ ಒಂದೂ ತುರ್ತು ಆಸ್ಪತ್ರೆ ಇಲ್ಲದಿರುವುದರಿಂದ ಹಲವಾರು ಜೀವಗಳು ಸಾವನ್ನಪ್ಪಿವೆ. ಹಾಗಾಗಿ ಜಿಲ್ಲೆಯಲ್ಲಿ ಅತಿ ಶೀಘ್ರದಲ್ಲಿ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ ಆಗಬೇಕು.
ಅಂಕೋಲಾ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಸೂತಿ ತಜ್ಞ ವೈದ್ಯರಿಲ್ಲದೆ ಗರ್ಭಿಣಿ ಮಹಿಳೆಯರು ಕಷ್ಟ ಅನುಭವಿಸುತ್ತಿದ್ದಾರೆ. ಈ ಕೂಡಲೇ ಸರ್ಕಾರ ಎಚ್ಚೆತ್ತು ಪ್ರಸೂತಿ ತಜ್ಞರ ನೇಮಕ ಮಾಡಬೇಕು. ಇಲ್ಲವಾದಲ್ಲಿ ಉಗ್ರವಾಗಿ ಪ್ರತಿಭಟನೆ ಮಾಡಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.


ಜಾನಪದ ಕಲಾವಿದ ಶಿವಾನಂದ ನಾಯ್ಕ ಮತ್ತು ಶಂಕರ ಗೌಡ ಉತ್ತರ ಕನ್ನಡ ಜಿಲ್ಲೆಯ ಜನರು ಆರೋಗ್ಯ ಸೌಕರ್ಯಗಳಿಲ್ಲದೆ ಬಳಲುತ್ತಿರುವ ಕುರಿತು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ವಿಡಂಬನಾತ್ಮಕವಾಗಿ ಎಚ್ಚರಿಕೆ ನೀಡುವ ಹಾಡುಗಳನ್ನು ರಚಿಸಿ ಪ್ರಸ್ತುತಪಡಿಸಿದರು.
ಗ್ರಾಮಸ್ಥರ ಪರವಾಗಿ ಸುರೇಶ ನಾಯಕ ಹಾಗೂ ಗಣೇಶ್ ನಾಯ್ಕ ಮಾತನಾಡಿದರು. ಪ್ರಮುಖರಾದ ವಿನೋದ ಗಾಂವಕರ ಮಾತನಾಡಿ, ಡಿವೈಡರ್ ನಿರ್ಮಾಣದ ಕುರಿತು ತೀರ್ಮಾನ ಕೈಗೊಳ್ಳದೇ ಇದ್ದರೆ ಯುವಕರ ಹಾಗೂ ಗ್ರಾಮಸ್ಥರ ಸಹಕಾರದಿಂದ ತಾವೇ ರಸ್ತೆಯನ್ನು ಅಗೆದು ಡಿವೈಡರ್ ನಿರ್ಮಿಸಲು ಮುಂದಾಗುತ್ತೇವೆ ಎಂದು ಎಚ್ಚರಿಕೆ ನೀಡಿದರು. ತಹಶೀಲ್ದಾರ್ ಅನಂತಶಂಕರ್ ಮನವಿ ಸ್ವೀಕರಿಸಿ ಜಿಲ್ಲಾಧಿಕಾರಿಗಳ ಮೂಲಕ ಮುಂದಿನ ಕ್ರಮ ಜರುಗಿಸುತ್ತೇವೆ ಎಂದರು.