ಟೆಸ್ಟ್ ಕ್ರಿಕೆಟ್ ಅಂದರೆ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯಿಂದ ಮಾನ್ಯತೆ ಪಡೆದುಕೊಂಡಿರುವ ಎರಡು ರಾಷ್ಟ್ರೀಯ ಕ್ರಿಕೆಟ್ ತಂಡಗಳ ನಡುವೆ ಐದು ದಿವಸಗಳ ಕಾಲ , 450 ಓವರ್‌ಗಳ ಪರ್ಯಂತ ಸಾಗುವ ಮಹಾ ಸಂಗ್ರಾಮ. ಕೆಲವು ಸಂದರ್ಭಗಳಲ್ಲಿ ಐದು ದಿವಸಗಳ ಆಟದ ಕೊನೆಯಲ್ಲೂ ಯಾವ ತಂಡವೂ ಜಯಾಪಜಯ ಹೊಂದದೆ ಪಂದ್ಯ ಸಮಭಲದಲ್ಲಿ ನೀರಸ ಡ್ರಾ ಗೊಳ್ಳುವುದೂ ಉಂಟು .ಇನ್ನು ಕೆಲವು ಸಂದರ್ಭಗಳಲ್ಲಿ ಪರಸ್ಪರ ಮುಖಾಮುಖಿಯಾಗುವ ತಂಡದ ಆಟಗಾರರ ಭಲಾಭಲ, ಪ್ರದರ್ಶನದ ಗುಣಮಟ್ಟ, ಅಂಕಣದ ಗುಣಧರ್ಮ ಇವುಗಳಿಂದಾಗಿ ಪಂದ್ಯ ಐದು ದಿವಸಗಳ ಪರ್ಯಂತ ಸಾಗದೇ ನಾಲ್ಕನೇ ದಿನದಂದೊ ಅಥವಾ ಮೂರನೇ ದಿನದಂದೊ ಮುಕ್ತಾಯಗೊಳ್ಳುವ ಸಾಧ್ಯತೆಯೂ ಇದೆ…
ಇತ್ತೀಚೆಗೆ ಕೇಪ್ ಟೌನ್ನ ನ್ಯೂಲ್ಯೇಂಡ್ಸ್‌ನಲ್ಲಿ ಸಂಪನ್ನಗೊಂಡ ಭಾರತ ಹಾಗೂ ಧಕ್ಷಿಣ ಆಫ್ರಿಕಾದ ನಡುವಿನ 2ನೇ ಟೆಸ್ಟ್ ಪಂದ್ಯ ಕೇವಲ ಒಂದೂವರೆ ದಿವಸದಲ್ಲಿ ಮುಕ್ತಾಯಗೊಂಡು ಇತಿಹಾಸದ ಪುಟ ಸೇರಿತು. 147 ವರ್ಷಗಳ ಕ್ರಿಕೆಟ್ ಇತಿಹಾಸದಲ್ಲಿ ಇದು ಅತ್ಯಂತ ಕಿರು ಅವಧಿಯಲ್ಲಿ ಹಾಗೂ ಅತ್ಯಂತ ಕಡಿಮೆ ಓವರ್ಗಳಲ್ಲಿ ಮುಗಿದ ಪಂದ್ಯ ಎಂಬ ದಾಖಲೆಗೆ ಸಾಕ್ಷಿಯಾಯಿತು..
ಇಡೀ ಟೆಸ್ಟ್ ಪಂದ್ಯದಲ್ಲಿ ಎರಡೂ ತಂಡಗಳು ಸೇರಿ ನಾಲ್ಕು ಇನ್ನಿಂಗ್ಸ್‌ಗಳಿಂದ ಆಡಿದ್ದು ಕೇವಲ 107 ಓವರ್‌ಗಳು ಮಾತ್ರ. ಅಂದರೆ ಕೇವಲ 642 ಎಸೆತಗಳು ಮಾತ್ರ ಆಡಲ್ಪಟ್ಟಿತು. ಹೆಚ್ಚು ಕಡಿಮೆ ಏಕದಿನ ಪಂದ್ಯದಷ್ಟೇ ಓವರ್‌ಗಳ ಆಟ ನಡೆದಂತಾಯಿತು. ಇದಕ್ಕೂ ಮುನ್ನ ನಡೆದ ಮೊದಲ ಟೆಸ್ಟ್ ಪಂದ್ಯ ಕೂಡಾ ಕೇವಲ ಮೂರು ದಿನಗಳಲ್ಲೇ ಮುಕ್ತಾಯಗೊಂಡಿತ್ತು. ಅದೂ ಕೂಡಾ ಡೀನ್ ಎಲ್ಗರ್ ಅವರ ಮ್ಯಾರಥಾನ್ ಇನ್ನಿಂಗ್ಸ್ ಹಾಗೂ ರಾಹುಲ್ ಅವರ ಸಮಯೋಚಿತ ಆಟಗಾರಿಕೆಯಿಂದ ಪಂದ್ಯ ಮೂರುದಿನಗಳ ಕಾಲ ಸಾಗುವಂತಾಯ್ತು. ಇಲ್ಲದಿದ್ದರೆ ಆ ಪಂದ್ಯ ಕೂಡಾ ಕಿರು ಅವಧಿಯಲ್ಲೇ ಕೊನೆಗಾಣುತ್ತಿತ್ತು…
ಐದು ದಿನಗಳ ಕಾಲ ಸಾಗಬೇಕಾಗಿದ್ದ ಟೆಸ್ಟ್ ಪಂದ್ಯಗಳು ಈಗೀಗ ಯಾಕಿಷ್ಟು ಅಲ್ಪಾವಧಿಯಲ್ಲಿಯೇ ಮುಗಿದು ಹೋಗುತ್ತಿದೆ ?
ಈ ಪ್ರಶ್ನೆಗೆ ಸಮರ್ಪಕ ಉತ್ತರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ನಾವು ಅಧ್ಯಯನ ನಡೆಸಿದರೆ, ಪ್ರಮುಖವಾಗಿ ಎರಡು ಕಾರಣಗಳು ನಮಗೆ ಗೋಚರಿಸುತ್ತದೆ. ಮೊದಲನೇಯದಾಗಿ ಆಡುವ ಅಂಕಣದ ಸ್ಥಿತಿಗತಿ ಹಾಗೂ ಗುಣಮಟ್ಟ, ಇನ್ನೊಂದು ಇನ್ಸ್ಟಂಟ್ ಕ್ರಿಕೆಟ್ ಅಂದರೆ ಟಿ-20 ಮತ್ತು ನಿಯಮಿತ ಓವರ್‌ಗಳ ಕ್ರಿಕೆಟ್ ಪಂದ್ಯಗಳು ಆಟಗಾರರ ಮೇಲೆ ಉಂಟು ಮಾಡಿರುವ ಗಾಢ ಪ್ರಭಾವ.
ಪ್ರಸ್ತುತ ವಿಶ್ವ ಕ್ರಿಕೆಟ್ ರಂಗದಲ್ಲಿ ಇನ್ಸ್ಟಂಟ್ ಕ್ರಿಕೆಟ್ ಗಳಿಸಿಕೊಳ್ಳುತ್ತಿರುವ ಬಾರಿ ಜನಪ್ರೀಯತೆಯಿಂದಾಗಿ ಟೆಸ್ಟ್ ಕ್ರಿಕೆಟ್ ಪಂದ್ಯಗಳು ತಮ್ಮ ಆಕರ್ಷಣೆಯನ್ನು ಕೊಂಚಮಟ್ಟಿಗೆ ಕಳೆದಕೊಂಡಿದೆ. ಅದರಲ್ಲೂ ಐದು ದಿವಸಗಳ ಕಾಲ ಆಟ ಆಡಿ ಸೋಲು, ಗೆಲುವಿನ ಫಲಿತಾಂಶ ದೊರಕದೇ ನೀರಸ ಡ್ರಾದಲ್ಲಿ ಸಮಾಪ್ತಿಯಾಗುವ ಪಂದ್ಯಗಳನ್ನು ಅಭಿಮಾನಿಗಳು ಎಂದಿಗೂ ಇಷ್ಟ ಪಡಲಾರರು. ಈ ನಿಟ್ಟಿನಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಇನ್ನೂ ಸ್ವಲ್ಪ ಮಟ್ಟಿನ ಗ್ಲಾಮರ್ ಒದಗಿಸುವ ಹಾಗೂ ಆಕರ್ಷಣೆಯನ್ನು ಹೆಚ್ಚಿಸುವ ಪ್ರಯತ್ನದಲ್ಲಿ ಸ್ಪರ್ಧಾತ್ಮಕ ಅಂಕಣಗಳನ್ನು ಸಿದ್ದಪಡಿಸಲಾಗುತ್ತಿದೆ. ಅದೂ ಅಲ್ಲದೇ ಅತಿಥೇಯ ರಾಷ್ಟ್ರ ತನ್ನ ಆಟಗಾರರ ಬಲಾಭಲಗಳ ಹಿತಾಸಕ್ತಿಗೆ ಅನುಗುಣವಾಗಿ ಅಂಕಣ ಸಿದ್ದಪಡಿಸುವುದು ಇಂದು ತೀರಾ ಸಾಮಾನ್ಯ ಸಂಗತಿ ಎನಿಸಿದೆ.
ಸಧ್ಯಕ್ಕೆ ಧಕ್ಷಿಣ ಆಫ್ರಿಕಾ ತಂಡದಲ್ಲಿ ಪ್ರತಿಭಾನ್ವಿತ, ಭಯಾನಕ ವೇಗದ ಬೌಲರ್ಗಳು ಸಾಕಷ್ಟು ಸಂಖ್ಯೆಯಲ್ಲಿದ್ದು, ತಂಡದ ಗೆಲುವು ಅವರ ಯಶಸ್ಸಿನ ಮೇಲೆ ಅವಲಂಬಿತವಾಗಿದೆ. ಅಂತೆಯೆ ದಕ್ಷಿಣ ಆಫ್ರಿಕಾದ ಅಂಕಣಗಳು ವೇಗವಾಹಿನಿಗಳ ಸ್ನೇಹಿ ಎನಿಸಿದ್ದು ಅಚ್ಚರಿಯೇನಲ್ಲ. ವಿಪರ್ಯಾಸ ಎನೆಂದರೆ ಹೀಗೆ ಎರಡು ದಿವಸಗಳೊಳಗೆ ಮುಗಿದು ಹೋದ ಪಂದ್ಯ ಭಾರತದಲ್ಲಿ ನಡೆದಿದ್ದು, ಸ್ಪಿನ್ನರ್‌ಗಳು ಅಧಿಕ ಸಂಖ್ಯೆಯಲ್ಲಿ ಬಲಿ ಪಡೆದಿದ್ದಲ್ಲಿ, ಜಗತ್ತಿನಾದ್ಯಂತ ಟೀಕೆಗಳ ಪ್ರವಾಹವೇ ನಮ್ಮೆಡೆಗೆ ಹರಿದು ಬರುತ್ತಿತ್ತು.
ಆಟಗಾರರ ತಾಂತ್ರಿಕ ಕೌಶಲ್ಯದ ದೃಷ್ಟಿಕೋನದಿಂದ ನೋಡುವುದಾದರೆ ಹಿಂದಿನ ಟೆಸ್ಟ್ ಪಂದ್ಯಗಳಿಗೂ ಇಂದು ಆಡಲಾಗುತ್ತಿರುವ ಟೆಸ್ಟ್ ಪಂದ್ಯಗಳಿಗೂ ಸಾಕಷ್ಟು ಬದಲಾವಣೆಯನ್ನು ನಾವು ಕಾಣಬಹುದಾಗಿದೆ. ಮೊದಲೆಲ್ಲ ಟೆಸ್ಟ್ ಪಂದ್ಯಗಳಲ್ಲಿ ಬ್ಯಾಟ್ಸ್‌ಮನ್‌ಗಳು ತುಂಬಾ ತಾಳ್ಮೆಯಿಂದ, ರಕ್ಷಣಾತ್ಮಕ ತಂತ್ರದೊಂದಿಗೆ ಆಟವಾಡುತ್ತಿದ್ರು. ಅಂತೆಯೆ ಒಂದಿಡೀ ದಿವಸದ ಆಟದಲ್ಲಿ ಹೆಚ್ಚೆಂದರೆ 250 ಓಟಗಳು ದಾಖಲಿಸ್ಪಡುತ್ತಿತ್ತು. ಆದರೆ ಇಂದು ಹಾಗಲ್ಲ. ಇನ್ಸ್ಟಂಟ್ ಕ್ರಿಕೆಟ್ ಪ್ರಭಾವಕ್ಕೊಳಗಾದ ಬ್ಯಾಟ್ಸ್‌ಮನ್‌ಗಳು, ಆಕ್ರಮಣಕಾರಿ ಶೈಲಿಯನ್ನು ಮೈಗೂಡಿಸಿಕೊಂಡಿರುವುದರಿಂದ ಒಂದೇ ರನ್‌ಗಳ ಪ್ರವಾಹವೇ ಹರಿದುಬರುತ್ತದೆ ಅಥವಾ ಒಂದರ ಹಿಂದೊಂದು ವಿಕಟ್ ತಪತಪನೆ ಉರುಳುತ್ತಾ ನೋಡನೋಡುತ್ತಿರುವಂತೆ ಇನ್ನಿಂಗ್ಸ್ ಅಂತ್ಯಗೊಳ್ಳುತ್ತದೆ. ಸಾಮಾನ್ಯವಾಗಿ ದಿನವೊಂದರ ಆಟದಲ್ಲಿ 350 ರಿಂದ 400 ಓಟಗಳು ಹರಿದು ಬರುತ್ತವೆ ಅಥವಾ ಆಲೌಟ್ ಆಗಿ ಇನ್ನಿಂಗ್ಸ್ ಸಮಾಪ್ತಿಗೊಳ್ಳುತ್ತದೆ.
ಈ ಎರಡು ಪ್ರಮುಖ ಕಾರಣಗಳಿಂದಾಗಿ ಇಂದಿನ ಟೆಸ್ಟ್ ಪಂದ್ಯಗಳು ಧಾರಾವಾಹಿ ಎನಿಸದೇ ಕಿರು ಚಿತ್ರಗಳಾಗಿ ಮೂಡಿಬರುತ್ತಿವೆ. ಬದಲಾವಣೆ ಜಗದ ನಿಯಮ. ಅದಕ್ಕೆ ಹೊಂದಿಕೊಂಡು ಸಾಗಬೇಕಾದುದು ತೀರಾ ಸ್ವಾಭಾವಿಕ. ಆದರೆ ಈ ಪರಿವರ್ತನೆಯಿಂದಾಗಿ ಟೆಸ್ಟ್ ಕ್ರಿಕೆಟ್ ತನ್ನ ಹಿಂದಿನ ಘನತೆ ,ಗಾಂಭೀರ್ಯತೆ ಹಾಗೂ ವೈಭವಗಳನ್ನು ಕಳೆದುಕೊಳ್ಳತ್ತಾ ಸಾಗುತ್ತಿದೆ ಎಂಬುದು ಮಾತ್ರ ಅಪ್ಪಟ ಸತ್ಯ.
ಟಿ.ಜಿ.ಹೆಗಡೆ, ಮಾಜಿ ಕ್ರಿಕೆಟಿಗರು, ಮಾಗೋಡು