ದಾಂಡೇಲಿ : ಈಗಾಗಲೇ ಚೌತಿ ಸಂಭ್ರಮ ಮುಗಿದಿದೆ. ದಾಂಡೇಲಿ ನಗರದಲ್ಲಿ 51 ಕಡೆಗಳಲ್ಲಿ ಸಾರ್ವಜನಿಕ ಗಣೇಶೋತ್ಸವ ಸಮಿತಿಗಳ ಮೂಲಕ ಶ್ರೀ ಗಣೇಶನನ್ನು ಪ್ರತಿಷ್ಠಾಪಿಸಲಾಗಿತ್ತು. ಇದರ ಹೊರತಾಗಿಯೂ ನಗರದ ಬಹುತೇಕ ಹಿಂದೂ ಧರ್ಮಿಯರ ಮನೆಗಳಲ್ಲಿಯೂ ಕೂಡ ಶ್ರೀ ಗಣಪನನ್ನು ಪ್ರತಿಷ್ಠಾಪಿಸಿ ಆರಾಧನೆ ಮಾಡಲಾಗಿತ್ತು.
ಹೀಗೆ ಪ್ರತಿಷ್ಠಾಪಿಸಿ ಆರಾಧಿಸಿದ ಗಣಪನನ್ನು ಕೊನೆಯಲ್ಲಿ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಆಶ್ರಯದಡಿ ಬಸವೇಶ್ವರನಗರದಲ್ಲಿ ನಿರ್ಮಾಣ ಮಾಡಲಾದ ಗಣಪನ ಹೊಂಡದಲ್ಲಿ ವಿಸರ್ಜನೆ ಮಾಡಿದರೇ, ಬಹುತೇಕರು ನಗರದ ಕಾಳಿ ನದಿಯಲ್ಲಿ ವಿಸರ್ಜನೆ ಮಾಡಿದ್ದರು. ಅದರಲ್ಲಿಯೂ ಮುಖ್ಯವಾಗಿ ಸಾರ್ವಜನಿಕ ಗಣೇಶೋತ್ಸವ ಸಮಿತಿಗಳ ಆಶ್ರಯದಲ್ಲಿ ಆರಾಧಿಸಲ್ಪಟ್ಟ ಗಣೇಶ ಮೂರ್ತಿಗಳನ್ನು ಕಾಳಿ ನದಿಯಲ್ಲಿ ವಿಸರ್ಜನೆ ಮಾಡಲಾಗಿತ್ತು.
ಅಂದಹಾಗೆ ಚೌತಿ ಮುಗಿದು ದಿನ ಎರಡಾದರೂ ಕಾಳಿ ನದಿಯಲ್ಲಿ ವಿಸರ್ಜನೆ ಮಾಡಲಾದ ಗಣಪತಿ ಮೂರ್ತಿಗಳು ಇನ್ನೂ ನದಿಯ ಮೆಟ್ಟಿಲ ಸಮೀಪದಲ್ಲೆ ತೇಲಾಡುತ್ತಿದೆ. ನದಿಯಲ್ಲಿ ನೀರಿನ ಹರಿಯುವಿಕೆಯ ಪ್ರಮಾಣ ಕಡಿಮೆಯಿರುವ ಹಿನ್ನಲೆಯಲ್ಲಿ ಗಣೇಶ ಮೂರ್ತಿಗಳು ಇನ್ನೂ ತೇಲಾಡುತ್ತಿರುವುದು ಕಂಡುಬರುತ್ತದೆ. ನದಿಯ ಮೆಟ್ಟಿಲ ಹತ್ತಿರ ತೇಲಾಡುತ್ತಿರುವ ಮೂರ್ತಿಗಳನ್ನು ನದಿಯ ಮಧ್ಯಭಾಗಕ್ಕೆ ಕೊಂಡೊಯ್ದು ಬಿಡಲು ಮೊಸಳೆಯ ಭಯ ಕಾಡತೊಡಗಿದೆ. ಹೀಗಿರುವಾಗ ಅರಣ್ಯ ಇಲಾಖೆಯವರು ದೋಣಿ ಮೂಲಕ ನದಿಯ ಮೆಟ್ಟಿಲ ಹತ್ತಿರ ತೇಲಾಡುತ್ತಿರುವ ಮೂರ್ತಿಗಳನ್ನು ನದಿ ಮಧ್ಯಕ್ಕೆ ಕೊಂಡೊಯ್ದು ಬಿಡಬೇಕೆಂಬ ಮನವಿ ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ