ದಾಂಡೇಲಿಯಲ್ಲಿ ಯಶಸ್ವಿಯಾಗಿ ಸಂಪನ್ನಗೊಂಡ ಉರ್ದು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ

ದಾಂಡೇಲಿ : ದಾಂಡೇಲಿಯ ಬಂಗೂರನಗರ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉರ್ದು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಇಂದು ಮಂಗಳವಾರ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮವನ್ನು ಬ್ರಹ್ಮಕುಮಾರಿ ಈಶ್ವರಿ ವಿದ್ಯಾಲಯದ ಸಂಚಾಲಕಿ ಗೀತಾಕುಮಾರಿಯವರು ಉದ್ಘಾಟಿಸಿ ಮಾತನಾಡುತ್ತಾ, ಮಕ್ಕಳಿಗೆ ಉನ್ನತ ಸಂಸ್ಕಾರ, ಸಂಸ್ಕೃತಿಯನ್ನು ಕಲಿಸಿಕೊಡುವಲ್ಲಿ ಶಿಕ್ಷಕರ ಪಾತ್ರದ ಜೊತೆಗೆ ಮಕ್ಕಳ ಪಾಲಕರ ಪಾತ್ರ ಬಹುಮುಖ್ಯವಾಗಿದೆ. ಭವಿಷ್ಯದಲ್ಲಿ ರಾಷ್ಟ್ರದ ಮಹತ್ವದ ಆಸ್ತಿಯನ್ನಾಗಿಸುವ ಮಹತ್ವಕಾಂಕ್ಷಿ ಉದ್ದೇಶವನ್ನಿಟ್ಟುಕೊಂಡು ಮಕ್ಕಳನ್ನು ಬೆಳೆಸಬೇಕೆಂದು ಕರೆ ನೀಡಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಸಾಮಾಜಿಕ ಮುಖಂಡ ದಾದಾಪೀರ್ ನದೀಮುಲ್ಲಾ ಅವರು ಸರಕಾರಿ ಶಾಲೆ ಎನ್ನುವ ಹಿಂಜರಿಕೆ ಬೇಡ. ಸರಕಾರಿ ಶಾಲೆ ಎಂಬ ಕೀಳರಿಮೆಯನ್ನು ಬಿಟ್ಟು ಹೆಮ್ಮೆಯಿಂದ ನಾವು ನಮ್ಮ ಮಕ್ಕಳನ್ನು ಸರಕಾರಿ ಶಾಲೆಗೆ ಕಳುಹಿಸಬೇಕೆಂದು ಕರೆ ನೀಡಿದರು.

ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಸುಲ್ತಾನ್ ಜಾಲೇಗಾರ ವಹಿಸಿದ್ದರು. ವೇದಿಕೆಯಲ್ಲಿ ರಾಜ್ಯ ಸರಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷರಾದ ಸುರೇಶ್ ನಾಯಕ, ಪ್ರಧಾನ ಕಾರ್ಯದರ್ಶಿ ಪ್ರವೀಣ್ ನಾಯ್ಕ, ಮುಖ್ಯೋಪಾಧ್ಯಯಿನಿ ಖಲೀದಾ, ಪ್ರಮುಖರಾದ ಮೆಹಬೂಬು ಸಾವ್ ಅತ್ತಾರ, ರಾಜೇಸಾಬ ಸುಂಕದ, ಉಬೇದುಲ್ಲಾ ಖಾನ್, ಮೆಹಬೂಬು ಖಾನ್, ಬಾಬುಲಾಲ್ ಫಿರ್ಜಾದೆ, ಮೌಲಾನಾ ಗುಲಾಂ ರಸೂಲ್ ಮತ್ತು ಪತ್ರಕರ್ತರಾದ ಸಂದೇಶ್.ಎಸ್.ಜೈನ್ ಹಾಗೂ ವಿವಿಧ ಶಾಲೆಗಳ ಮುಖ್ಯೋಪಾಧ್ಯಯರು ಮೊದಲಾದವರು ಉಪಸ್ಥಿತರಿದ್ದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷರಾದ ಸುಲೇಮಾನ್ ಶೇಖ್ ಸ್ವಾಗತಿಸಿದರು. ಹಳೆದಾಂಡೇಲಿ ಉರ್ದು ಪ್ರೌಢಶಾಲೆಯ ಮುಖ್ಯೋಪಾಧ್ಯಯರಾದ ಅಬ್ದುಲ್ ರೆಹಮಾನ್ ವಂದಿಸಿದರು. ಸಿ.ಆರ್.ಪಿ ಲಲಿತಾ ನಾಯ್ಕ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.