ದಾಂಡೇಲಿ : ಅವರೆಲ್ಲರೂ ಕಷ್ಟಪಟ್ಟು ದುಡಿದು ಬದುಕು ಕಟ್ಟಿಕೊಂಡವರು. ದುಡಿಯೋಣ ಅಂದರೆ ಹೊಲವಿಲ್ಲ. ಉಳ್ಕೊಳ್ಳಕ್ಕೆ ಮನೆಯನ್ನಷ್ಟೆ ಹೊಂದಿದ್ದಾರೆ. ಇನ್ನೂ ಸಂಸಾರ ನಿರ್ವಹಣೆಗಾಗಿ ದಾಂಡೇಲಿ ಇಲ್ಲವೆ ಅಂಬಿಕಾನಗರಕ್ಕೆ ಕೂಲಿ ಕೆಲಸಕ್ಕೆ ಹೋಗಬೇಕಾದ ಅನಿವಾರ್ಯತೆ., ಆದರೂ ಎಂದು ಯಾರ ಬಳಿಯೂ ಕೈ ಚಾಚಿದ ಮತ್ತು ಚಾಚುವ ಗುಣ ಸ್ವಭಾವದವರಲ್ಲ. ಅಂದ ಹಾಗೆ ಇವರ್ಯಾರು ಇವರೆಲ್ಲಿದ್ದಾರೆ, ಇವರ ಊರು ಯಾವುದಿರಬಹುದೆಂಬ ಪ್ರಶ್ನೆ ನಿಮಗೆ ಮೂಡುವುದು ಸಹಜ.
ದಾಂಡೇಲಿ ತಾಲ್ಲೂಕಿನ ಕುಳಗಿ ಹತ್ತಿರದಲ್ಲಿರುವ ಕೋಗಿಲಬನ/ಬಡಕಾನಶಿರಡಾ ಗ್ರಾಮ ಪಂಚಾಯ್ತು ವ್ಯಾಪ್ತಿಗೆ ಬರುವ ಹಾಗೂ ದಟ್ಟಾಡವಿಯ ಮಧ್ಯೆ ಇರುವ ಪುಟ್ಟ ಗ್ರಾಮವೆ ಕಲಬಾವಿ. ಸುತ್ತಲು ಕಾಡು, ಕಾಡಿನ ನಡುವೆ ರಸ್ತೆ. ಸರಿ ಸುಮಾರು 30 ಮನೆಗಳಿದ್ದು 200 ರಿಂದ 300 ಜನಸಂಖ್ಯೆಯಿರುವ ಹಳ್ಳಿಯಿದು. ಇಲ್ಲೊಂದು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಿದೆ. ಐದನೆ ತರಗತಿ ಆದ ಬಳಿಕ ಇಲ್ಲಿನ ಮಕ್ಕಳು ಮುಂದಿನ ಕಲಿಕೆಗಾಗಿ ದಾಂಡೇಲಿ ಇಲ್ಲವೆ ಅಂಬಿಕಾನಗರಕ್ಕೆ ಹೋಗಬೇಕು. ಬಸ್ಸಿಗಾಗಿ ಕನಿಷ್ಟವೆಂದರೂ 6 ಕಿ.ಮೀ ವರೆಗೆ ನಡೆದು ಕುಳಗಿಗೆ ಹೋಗಿ ಬಸ್ಸನ್ನೇರಬೇಕು. ಹಾಗೆ ನೋಡಿದರೇ ಕಾಡಿನ ನಡುವೆ ರಸ್ತೆಯಿರುವುದರಿಂದ ವನ್ಯಪ್ರಾಣಿಗಳಾದ ಕರಡಿ, ಚಿರತೆಗಳ ಹಾವಳಿಯೂ ಇಲ್ಲಿದೆ. ಕುಳಗಿ ಬಸ್ ನಿಲ್ದಾಣವರೆಗೆ ಮನೆ ಮಂದಿಯೆ ತಮ್ಮ ಮಕ್ಕಳನ್ನು ಶಾಲೆಗೆ ಹೋಗಲು ಕರೆ ತರಬೇಕು. ಅಂತೆಯೇ ಸಂಜೆಯೂ ಮನೆ ಜನರೆ ಕುಳಗಿಗೆ ಹೋಗಿ ಮಕ್ಕಳನ್ನು ಮರಳಿ ಕರೆದುಕೊಂಡು ಬರಬೇಕು. ಅದು ಕೂಲಿ ಕೆಲಸಕ್ಕೆ ಹೋಗುವುದರಿಂದ ಬಹುತೇಕ ದಿನಗಳಲ್ಲಿ ಇದು ಅಸಾಧ್ಯವೆ ಆಗಿದೆ. ಹಾಗಾಗಿ ಬಸ್ಸಿನಿಂದ ಇಳಿದು ಮಕ್ಕಳೆ ಗುಂಪಾಗಿ ಹೋಗುವ ಮೂಲಕ ಕಲಬಾವಿ ಗ್ರಾಮವನ್ನು ಸೇರುತ್ತಾರೆ. ಶಾಲೆಗೆ ಹೋದ ಮಕ್ಕಳು ಕುಳಗಿಯವರೆಗೆ ಬರುತ್ತಾರೆ ಎನ್ನುವ ನಂಬಿಕೆ ಮಕ್ಕಳ ಪಾಲಕರಿಗಿದ್ದರೂ, ಕುಳಗಿಯಿಂದ ಕಲಬಾವಿಗೆ ವನ್ಯಪ್ರಾಣಿಗಳ ಭಯದ ನಡುವೆ ಮಕ್ಕಳು ಮನೆ ಸೇರಿದ್ರೆ ಸಾಕೆಂಬ ಪ್ರಾರ್ಥನೆ ನಿತ್ಯ ನಿರಂತರ ಎಂಬಂತಾಗಿದೆ. ಹಾಗಾಗಿ ಇಲ್ಲಿಯ ಬಹುತೇಕ ಮಕ್ಕಳು ಶಾಲೆಗೆ ಅರ್ಧದಲ್ಲೆ ಗುಡ್ ಬೈ ಹಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ನಾವು ಕೂಲಿ ಮಾಡಿದ್ದು ಸಾಕು, ನಮ್ಮ ಮಕ್ಕಳಾದರೂ ಕಲಿತು ಯೋಗ್ಯ ನೌಕರಿಯನ್ನು ಗಿಟ್ಟಿಸಿಕೊಂಡು ಸಂತೃಪ್ತಿಯ ಜೀವನ ನಡೆಸಬೇಕೆಂಬ ಉತ್ಕಟ ಬಯಕೆ ಮಕ್ಕಳ ಪಾಲಕರಿಗಿದ್ದರೂ, ಸೂಕ್ತ ಸಾರಿಗೆ ಬಸ್ಸಿನ ಸೌಲಭ್ಯವಿಲ್ಲದಿರುವುದರಿಂದ ಮಕ್ಕಳ ಶಿಕ್ಷಣವು ಅರ್ಧದಲ್ಲೆ ಮೊಟಕುಗೊಳ್ಳುತ್ತಿದೆ. ಇಲ್ಲಿಗೆ ಕನಿಷ್ಟವೆಂದರೂ ಬೆಳಿಗ್ಗೆ ಮತ್ತು ಸಂಜೆ ಸಾರಿಗೆ ಬಸ್ ಸಂಪರ್ಕ ಬೇಕೆಂಬ ಮನವಿ ಕಳೆದ ಅನೇಕ ವರ್ಷಗಳಿಂದ ಇಲ್ಲಿಯ ಜನತೆಯದ್ದಾಗಿದ್ದರೂ, ಚುನಾವಣೆಯ ಸಮಯದಲ್ಲಿ ಭರವಸೆ ಕೊಟ್ಟು ಹೋಗುವ ರಾಜಕಾರಣಿಗಳು ಈ ಬಾರಿಯೂ ಅದನ್ನೆ ಮುಂದುವರಿಸಿದ್ದಾರೆ. ಚುನಾವಣೆ ಮುಗಿದಿದೆ, ಆದರೆ ಕಲಬಾವಿಯ ಜನತೆಯ ಸಾರಿಗೆ ಬಸ್ ಸಂಪರ್ಕದ ಬೇಡಿಕೆ ಮಾತ್ರ ಇನ್ನೂ ಈಡೇರಿಲ್ಲ.
ಈ ನಿಟ್ಟಿನಲ್ಲಿ ಇಂದು ಕಲಬಾವಿಯಲ್ಲಿ ದಾಂಡೇಲಿಯ ಮಾಧ್ಯಮ ಮಿತ್ರರು ಗ್ರಾಮಸ್ಥರೊಂದಿಗೆ ಸಂವಾದ ಸಭೆಯನ್ನು ನಡೆಸಿ, ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದರು. ಗ್ರಾಮಸ್ಥರು ಮೊದಲು ನಮಗೆ ಸಾರಿಗೆ ಬಸ್ಸಿನ ಸೌಲಭ್ಯ ಬೇಕೆಂಬ ನಮ್ರ ಮನವಿಯನ್ನು ಮಾಡಿದ್ದಾರೆ. ನಮ್ಮ ಮಕ್ಕಳ ಶಿಕ್ಷಣ ಅರ್ಧದಲ್ಲಿ ನಿಲ್ಲಬಾರದೆಂದಾದರೇ ದಯವಿಟ್ಟು ಸಾರಿಗೆ ಬಸ್ಸಿನ ಸಂಪರ್ಕವನ್ನು ಕಲ್ಪಿಸಬೇಕೆಂದು ಮಾದ್ಯಮದ ಮೂಲಕ ಸಂಬಂಧಪಟ್ಟವರಿಗೆ ಮನವಿ ಮಾಡಿದ್ದಾರೆ.
ಸಂವಾದದಲ್ಲಿ ಪತ್ರಕರ್ತರುಗಳಾದ ರಾಜೇಶ್ ತಳೇಕರ್, ಸಂದೇಶ್.ಎಸ್.ಜೈನ್, ಅಕ್ಷಯ್ ಗೋಸಾವಿ, ಪ್ರವೀಣ್ ಸುಲಾಖೆಯವರು ಉಪಸ್ಥಿತರಿದ್ದು, ಗ್ರಾಮಸ್ಥರೊಂದಿಗೆ ಮುಕ್ತ ಸಂವಾದ ನಡೆಸಿದರು. ಕಲಬಾವಿಯ ಗ್ರಾಮಸ್ಥರು ತಮ್ಮೆಲ್ಲ ನೋವುಗಳನ್ನು, ಯಾತನೆಗಳನ್ನು ಮರೆತು ಮಾಧ್ಯಮದವರ ಜೊತೆ ಬೆರೆತು ಮುಕ್ತವಾಗಿ ಚರ್ಚೆ ಮಾಡಿ ಕಲಬಾವಿ ಗ್ರಾಮದ ಸಂಸ್ಕೃತಿ ಮತ್ತು ಸಂಸ್ಕಾರಯುತವಾದ ನಡವಳಿಕೆಗಳನ್ನು ಸಾರಿದರು.