ದಾಂಡೇಲಿ :ದಾಂಡೇಲಿಯಲ್ಲಿ ಕತ್ತಲೆಯಲ್ಲಿರುವ ಇಂದಿರಾ ಕ್ಯಾಂಟೀನ್ : ವಿದ್ಯುತ್ ಬಿಲ್ ಬಾಕಿ – ಕರೆಂಟ್ ಕಟ್

ದಾಂಡೇಲಿ : ಅಂದು ಸಿದ್ದರಾಮಯ್ಯನವರ ನೇತೃತ್ವದ ಸರಕಾರವಿದ್ದಾಗ ಆಗಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಆರ್.ವಿ.ದೇಶಪಾಂಡೆಯವರ ವಿಶೇಷ ಪ್ರಯತ್ನದಡಿ ಮಂಜೂರುಗೊಂಡು ಆರಂಭವಾಗಿದ್ದ ದಾಂಡೇಲಿ ನಗರದ ಇಂದಿರಾ ಕ್ಯಾಂಟೀನ್ ಬಹಳಷ್ಟು ಜನರಿಗೆ ಅನುಕೂಲಸಿಂಧುವಾಗಿತ್ತು.

ಬಡವರಿಗೆ, ವಿದ್ಯಾರ್ಥಿಗಳಿಗೆ, ತರಕಾರಿ ಮಾರಲು ಬರುವ ಹಳ್ಳಿಯ ರೈತರಿಗೆ ತ್ಯಲ್ಪ ಮೊತ್ತದಲ್ಲಿ ಉಪಹಾರ, ಊಟ ಮಾಡಲು ಸಹಕಾರಿಯಾಗಿದ್ದ ಇದೇ ಇಂದಿರಾ ಕ್ಯಾಂಟೀನ್ ಕಳೆದ ಏ:28 ರಿಂದ ಕರೆಂಟ್ ಇಲ್ಲದೇ ಕತ್ತಲಲ್ಲೆ ಸೇವೆ ನೀಡುತ್ತಾ ಬಂದಿದೆ. ವಿದ್ಯುತ್ ಬಿಲ್ ತುಂಬದೇ ಇದ್ದ ಹಿನ್ನಲೆಯಲ್ಲಿ ಹೆಸ್ಕಾಂನವರು ಇಲ್ಲಿಗೆ ವಿದ್ಯುತ್ ಪೊರೈಕೆಯನ್ನು ಸ್ಥಗಿತಗೊಳಿಸಿದ್ದಾರೆ. ಕರೆಂಟ್ ಇಲ್ಲದಿರುವುದರಿಂದ ಉಪಹಾರ, ಅಡುಗೆ ತಯಾರಿಕೆಗೆ ಸಾಕಷ್ಟು ಕಷ್ಟವಾಗತೊಡಗಿದೆ. ಇಲ್ಲಿಯ ಕೆಲಸ ನಿರ್ವಹಿಸುವ ಸಿಬ್ಬಂದಿಗಳು ತಮ್ಮ ತಮ್ಮ ಮನೆಯಲ್ಲಿಯೆ ಮಸಾಲೆ ಅರೆದು ಇಲ್ಲಿಗೆ ತರಬೇಕಾದ ಸ್ಥಿತಿಯಿದೆ. ಇನ್ನೂ ರಾತ್ರಿ ವೇಳೆಯಲ್ಲಿ ಊಟಕ್ಕೆ ಬರುವ ಗ್ರಾಹಕರಿಗೆ ತೊಂದರೆಯಾಗದಿರಲೆಂದು ಚಾರ್ಜರ್ ದೀಪ ಇಲ್ಲವೇ ಮೇಣದ ಬತ್ತಿ ಹಚ್ಚಿ ಊಟ ವಿತರಿಸಲಾಗುತ್ತದೆ.

ಈ ಬಗ್ಗೆ ಸಂಬಂಧಪಟ್ಟವರ ಗಮನಕ್ಕೆ ತರಲಾಗಿದೆ. ಕೂಡಲೆ ವಿದ್ಯುತ್ ಬಿಲ್ ತುಂಬುವ ವ್ಯವಸ್ಥೆಯಾಗಲಿದೆ. ಮತ್ತೇ ಎಂದಿನಂತೆ ಇಂದಿರಾ ಕ್ಯಾಂಟೀನಿಗೆ ವಿದ್ಯುತ್ ಪೊರೈಕೆಯಾಗಲಿದೆ ಎಂದು ಇಂದಿರಾ ಕ್ಯಾಂಟೀನಿನಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂದಿ ಗುರು ಅವರು ಇಂದು ಮಾಧ್ಯಮಕ್ಕೆ ತಿಳಿಸಿದ್ದಾರೆ. ಅದೇನೆ ಇರಲಿ ಸಿದ್ದರಾಮಯ್ಯನವರ ಕನಸಿನ ಇಂದಿರಾ ಕ್ಯಾಂಟೀನ್ ಕತ್ತಲಿನಿಂದ ಬೆಳಕಿನೆಡೆಗೆ ಶೀಘ್ರ ಬರುವಂತಾಗಲೆನ್ನುವುದೆ ಎಲ್ಲರ ಆಶಯವಾಗಿದೆ.