ಸ್ವಾಮಿ ಇವರು ಮಾಡಿರೋ ಕೆಲಸದಿಂದ ಗುಡಿಸಲಿಗೆ ನೀರು ಬರ್ತಿದೆ- ಎಡಿಜಿಪಿ ಮುಂದೆ ವೃದ್ಧೆ ಕಣ್ಣೀರು

ಮಂಡ್ಯ: ಬೆಂಗಳೂರು- ಮೈಸೂರು ದಶಪಥ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಪ್ರಕರಣ ಹೆಚ್ಚಳ ಹಿನ್ನೆಲೆಯಲ್ಲಿ ರಾಮನಗರದ ನಂತರ ಇದೀಗ ಮಂಡ್ಯ ವ್ಯಾಪ್ತಿಯಲ್ಲಿ ಎಡಿಜಿಪಿ ಅಲೋಕ್ ಕುಮಾರ್ ಪರಿಶೀಲನೆ ನಡೆಸುತ್ತಿದ್ದಾರೆ. ಈ ವೇಳೆ ವೃದ್ಧೆಯೊಬ್ಬರು ಎಡಿಜಿಪಿ ಮುಂದೆ ತಮ್ಮ ಅಳಲುತೋಡಿಕೊಂಡಿದ್ದಾರೆ.

ಮಂಡ್ಯ ವ್ಯಾಪ್ತಿಯ ಹೆದ್ದಾರಿಯಲ್ಲಿ ಅಪಘಾತ ಹೆಚ್ಚಿರುವ ಸ್ಥಳದಲ್ಲಿ ಎಡಿಜಿಪಿ ಅಲೋಕ್ ಕುಮಾರ್ ಪರಿಶೀಲನೆ ನಡೆಸುತ್ತಿದ್ದರು. ಈ ವೇಳೆ ವೃದ್ಧೆಯೊಬ್ಬರು ಕೈ ಮುಗಿದು ಅಲೋಕ್ ಕುಮಾರ್ ಮುಂದೆ ಕಣ್ಣೀರು ಹಾಕಿದ್ದಾರೆ.

ವೃದ್ಧೆ ಹೇಳಿದ್ದೇನು..?: ಸ್ವಾಮಿ ಇವರು ಮಾಡಿರೋ ಕೆಲಸಕ್ಕೆ ನನ್ನ ಗುಡಿಸಲಿಗೆ ನೀರು ಬರುತ್ತಿದೆ. ಇವರು ಸರ್ವಿಸ್ ರಸ್ತೆಯ ಚರಂಡಿಯನ್ನು ಸರಿಯಾಗಿ ಮಾಡಿಲ್ಲ. ಮಳೆ ನೀರು ಎಲ್ಲಾ ನನ್ನ ಗುಡಿಸಲಿಗೆ ಬರುತ್ತಿದೆ. ನೋಡಿ ಸ್ವಾಮಿ ನೆಮ್ಮದಿಯಾಗಿ ಬದುಕೋಕೆ ಆಗುತ್ತಿಲ್ಲ. ಅವರಿಗೆ ಹೇಳಿ ಸರಿ ಮಾಡಿಸಿ ಸ್ವಾಮಿ ಎಂದು ವೃದ್ಧೆ ಮನವಿ ಮಾಡಿಕೊಂಡಿದ್ದಾರೆ. ವೃದ್ಧೆಯ ಮಾತು ಕೇಳಿರುವ ಎಡಿಜಿಪಿ ಸರಿ ಮಾಡಿಸುವ ಭರವಸೆ ನೀಡಿದರು.

ಇತ್ತ ಜನರು ಕೂಡ ಎಡಿಜಿಪಿ ಅಲೋಕ್ ಕುಮಾರ್ ಗೆ ದೂರು ನೀಡಿದ್ದಾರೆ. ಸರ್ವಿಸ್ ರಸ್ತೆಯನ್ನು ಸಹ ಇವರು ಸರಿಯಾಗಿ ಮಾಡಿಲ್ಲ. ಸರ್ವಿಸ್ ರಸ್ತೆಯಲ್ಲಿ ಚರಂಡಿಗಳು ಆಗಿಲ್ಲ. ಬೇಡದ ಸ್ಥಳದಲ್ಲಿ ರಸ್ತೆ ಹಂಪ್ಸ್ ಹಾಕಿದ್ದಾರೆ. ಬೇಕಾಗಿರುವ ಸ್ಥಳದಲ್ಲಿ ರಸ್ತೆ ಹಮ್ಸ್ ಹಾಕಿಲ್ಲ. ಇದರಿಂದ ಹೆಚ್ಚು ಅಪಘಾತಗಳು ಆಗುತ್ತಿವೆ ಎಂದು ದೂರಿದ್ದಾರೆ.

ಜನರ ದೂರು ಸ್ವೀಕರಿಸಿರುವ ಅಲೋಕ್ ಕುಮಾರ್, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚನೆ ನೀಡಿದರು. ಕೆಲ ತಪ್ಪುಗಳಿಂದ ಅಪಘಾತಗಳು ಹೆಚ್ಚಾಗುತ್ತಿವೆ. ಜನರು ನಿಮ್ಮ ಜೊತೆಗೆ ಪೊಲೀಸ್ ಇಲಾಖೆಗೆ ಬೈಯ್ಯುತ್ತಾರೆ. ಆಗಿರುವ ತಪ್ಪುಗಳನ್ನು ಸರಿಪಡಿಸಬೇಕು. ತಿರುವು ಇರುವ ಕಡೆ ನಾಮ ಫಲಕ ಹಾಕಬೇಕು. ಸರ್ವಿಸ್ ರಸ್ತೆಯಲ್ಲಿ ಲೋಪಗಳನ್ನು ಸರಿಪಡಿಸಿ. ಅಪಘಾತ ಪ್ರಕರಣಗಳನ್ನು ತಡೆಯುವುದು ಹೆದ್ದಾರಿ ಪ್ರಾಧಿಕಾರ ಹಾಗೂ ಪೊಲೀಸ್ ಇಲಾಖೆಯ ಕರ್ತವ್ಯ ಎಂದಿದ್ದಾರೆ.