ಕಲಬುರಗಿ: ಅನೇಕರು ದುಡಿದು ತಿನ್ನುವುದನ್ನು ಬಿಟ್ಟು ಕಾಣದ ನಿಧಿ ಹುಡುಕಲು ಹತ್ತಾರು ರೀತಿಯ ವ್ಯರ್ಥ ಕಸರತ್ತು ಮಾಡುತ್ತಲೇ ಇರುತ್ತಾರೆ. ಅದರಲ್ಲೂ ಕಲಬುರಗಿ ಸೇರಿದಂತೆ ಉತ್ತರ ಕರ್ನಾಟಕದ ಅನೇಕ ಜಿಲ್ಲೆಯಲ್ಲಿ ಕೆಲವರು ನಿಧಿ ಹುಡುಕಾಟ ಮಾಡೋದನ್ನೇ ತಮ್ಮ ದೈನಂದಿನ ಕೆಲಸ ಮಾಡಿಕೊಂಡಿದ್ದು, ಅನೇಕ ದೇವಸ್ಥಾನ, ಕೋಟೆಗಳಲ್ಲಿ ನಿಧಿಗಾಗಿ ಭೂಮಿ ಅಗೆಯುತ್ತಲೇ ಇದ್ದಾರೆ. ಕಲಬುರಗಿ ಜಿಲ್ಲೆಯಲ್ಲಿ ನಿಧಿಯಾಸೆಗಾಗಿ ದುಷ್ಕರ್ಮಿಗಳು ದೇವಸ್ಥಾನದ ಶಿವಲಿಂಗವನ್ನೇ ಕಿತ್ತೆಸೆದಿರುವ ಘಟನೆ ನಡೆದಿದೆ.
ನಿಧಿಗಾಗಿ ಶಿವಲಿಂಗ ಕಿತ್ತೆಸದ ಕಿರಾತಕರು
ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಸೂಗೂರು ಎನ್ ಗ್ರಾಮದ ಹೊರವಲಯದಲ್ಲಿರುವ ಮಲ್ಲಿಕಾರ್ಜುನ ದೇವಸ್ಥಾನದ ಶಿವಲಿಂಗವನ್ನು ದುಷ್ಕರ್ಮಿಗಳು ಕಿತ್ತೆಸೆದಿದ್ದು, ಶಿವಲಿಂಗ ಇದ್ದ ಜಾಗದಲ್ಲಿ ನಿಧಿಗಾಗಿ ಶೋಧ ನಡೆಸಿದ್ದಾರೆ. ಮಲ್ಲಿಕಾರ್ಜುನ ಅನ್ನೋ ವ್ಯಕ್ತಿಯ ಜಾಗದಲ್ಲಿ ಪುಟ್ಟ ದೇವಸ್ಥಾನವಿತ್ತು. ದುಷ್ಕರ್ಮಿಗಳು ಕಳೆದ ರಾತ್ರಿ ಯಾರು ಇಲ್ಲದ ಸಮಯದಲ್ಲಿ ನುಗ್ಗಿ, ಶಿವಲಿಂಗವನ್ನು ಕಿತ್ತು ಬೇರಡೆ ಇಟ್ಟು ನಿಧಿ ಹುಡುಕಾಟ ನಡೆಸಿದ್ದಾರೆ. ಅದೇ ಸ್ಥಳದಲ್ಲಿ ಪೂಜೆ ಕೂಡಾ ಮಾಡಿದ್ದಾರೆ. ಇನ್ನು ಇಂದು ಕಾರ ಹುಣ್ಣಿಮೆ ಇರುವುದರಿಂದ ಹುಣ್ಣಿಮೆ ಮತ್ತು ಅಮವಾಸ್ಯೆ ದಿನ ಪೂಜೆ ಮಾಡಿದ್ರೆ ನಿಧಿ ಸಿಗುತ್ತೆ ಅನ್ನೋ ನಂಬಿಕೆ ಕೆಲವರಲ್ಲಿದೆ. ಹುಣ್ಣಿಮೆ ದಿನವೇ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ದುಷ್ಕರ್ಮಿಗಳು ನಿಧಿ ಹುಡುಕಾಟ ನಡೆಸಿದ್ದಾರೆ.
ಈ ಹಿಂದೆ ಕೂಡ ನಿಧಿ ಶೋಧ ನಡೆಸಿದ್ದ ದುಷ್ಕರ್ಮಿಗಳು
ಇನ್ನು ಸೂಗೂರು ಎನ್ ಗ್ರಾಮದಲ್ಲಿರುವ ಈ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ನಿಧಿ ಶೋಧ ಮಾಡಿರುವುದು ಮೊದಲೇನಲ್ಲಾ. ಮೂರು ವರ್ಷದ ಹಿಂದೆ ಕೂಡಾ ಇದೇ ರೀತಿ ದುಷ್ಕರ್ಮಿಗಳು ಶಿವಲಿಂಗವನ್ನು ಕಿತ್ತು ನಿಧಿಗಾಗಿ ಹುಡುಕಾಟ ನಡೆಸಿದ್ದರು. ದೇವಸ್ಥಾನದ ಕೆಳಗೆ ನಿಧಿ ಸಿಗುತ್ತದೆ ಅನ್ನೋ ಮೂಢನಂಬಿಕೆಯಿಂದ ಕೆಲವರು ಮೇಲಿಂದ ಮೇಲೆ ಜಿಲ್ಲೆಯ ಅನೇಕ ದೇವಸ್ಥಾನದಲ್ಲಿ ನಿಧಿಗಾಗಿ ಶೋಧ ನಡೆಸೋ ಕೆಲಸವನ್ನು ಮಾಡುತ್ತಲೇ ಇದ್ದಾರೆ.
ನಿಧಿಗಾಗಿ ಜೀವ ತಗೆದಿದ್ದ ದುಷ್ಕರ್ಮಿಗಳು
ಇನ್ನು ಕಲಬುರಗಿ ಜಿಲ್ಲೆಯ ಅನೇಕ ಕಡೆ ನಿಧಿಗಾಗಿ ಪೂಜೆ ಮಾಡುವುದು, ನಿಧಿಗಾಗಿ ಪುಟ್ಟ ಮಕ್ಕಳನ್ನು ಬಲಿ ಕೊಡುವುದು, ಪ್ರಾಣಿಗಳನ್ನು ಬಲಿ ಕೊಡುವುದನ್ನು ಕೆಲವರು ಮಾಡುತ್ತಲೇ ಇದ್ದಾರೆ. ದಶಕದ ಹಿಂದೆ ಕಲಬುರಗಿ ಜಿಲ್ಲೆಯ ಪಿರೋಜಾಬಾದ್ ನಲ್ಲಿ ಸ್ವತಃ ತಂದೆಯೇ ತನ್ನ ಐದು ವರ್ಷದ ಮಗಳನ್ನು ನಿಧಿಗಾಗಿ ಬಲಿ ನೀಡಿದ್ದ. ಕಲಬುರಗಿ ಜಿಲ್ಲೆಯ ಅನೇಕ ಕಡೆ ನಿಧಿಗಾಗಿ ಅನೇಕರ ಪ್ರಾಣಿಗಳನ್ನು ಬಲಿ ಕೊಟ್ಟ ಅನೇಕ ಉದಾಹರಣೆಗಳಿವೆ.
ಇನ್ನು ಸೂಗೂರು ಎನ್ ಗ್ರಾಮದಲ್ಲಿರುವ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ನಿಧಿಗಾಗಿ ಹುಡುಕಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ದೇವಸ್ಥಾನಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.