ಬೆಳಗಾವಿ: ಅತಿವೃಷ್ಟಿಯಿಂದ ಮನೆ ಬಿದ್ದು 9 ತಿಂಗಳು ಕಳೆದರೂ ಪರಿಹಾರ ನೀಡದ ಆರೋಪ ಹಿನ್ನೆಲೆ ಮನೆ ನಿರ್ಮಿಸಿ ಕೊಡದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ವ್ಯಕ್ತಿಯೊಬ್ಬರು ವಿಡಿಯೋ ಮಾಡಿ ಅಳಲು ತೋಡಿಕೊಂಡಿದ್ದಾರೆ. ಖಾನಾಪೂರ ತಾಲೂಕಿನ ಕಕ್ಕೇರಿ ಗ್ರಾಮದ ಈರಪ್ಪ ನಾಡಗೌಡ್ರ ಎಂಬಾತ ಮೊಬೈಲ್ ಸೆಲ್ಪಿ ವಿಡಿಯೋ ಮಾಡಿ ಶಾಸಕಿ ಅಂಜಲಿ ನಿಂಬಾಳ್ಕರ್, ಹಾಗೂ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ನಿರಂತರ ಮಳೆಗೆ ಕಳೆದ ನವೆಂಬರ್ನಲ್ಲಿ ಯಲ್ಲಪ್ಪ ನಾಡಗೌಡ್ರ ಅವರ ಮನೆ ನೆಲಸಮವಾಗಿತ್ತು. ಮನೆ ಬಿದ್ದರೂ ಪರಿಹಾರ ನೀಡಿಲ್ಲ.ಶಾಸಕಿ ಅಂಜಲಿ ನಿಂಬಾಳ್ಕರ್, ಖಾನಾಪುರ ತಹಶಿಲ್ದಾರ್, ಬೆಳಗಾವಿ ಡಿಸಿ, ಲೋಕಾಯುಕ್ತ, ಸಿಎಂಗೆ ಪತ್ರ ಬರೆದರೂ ಪ್ರಯೋಜನ ಆಗ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ರೋಸಿ ಹೋಗಿರುವ ನೆರೆ ಸಂತ್ರಸ್ತ ಯಲ್ಲಪ್ಪ ಮೊಬೈಲ್ ವಿಡಿಯೋ ಮಾಡಿ ಅಳಲನ್ನು ತೋಡಿಕೊಂಡಿದ್ದು ನೆರೆ ಸಂತ್ರಸ್ತ ಮಾತನಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಶಾಸಕರಿಗೆ ಕರೆ ಮಾಡಿದ್ರೆ ಸರ್ಕಾರದಿಂದ ಪರಿಹಾರ ಬಂದಿಲ್ಲ ಅಂತಾ ಪೋನ್ ಕಟ್ ಮಾಡ್ತಾರೆ ಎಂದಿದ್ದಾರೆ.
ಗ್ರಾಮಲೆಕ್ಕಾಧಿಕಾರಿ ಎರಡು ಸಾವಿರ ರೂಪಾಯಿ ಹಣ ಪಡೆದಿದ್ರು. ಆದರೆ ನನಗೆ ಪರಿಹಾರ ಕೊಡಿಸುವ ನಿಟ್ಟಿನಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ. ಶಾಸಕಿ ಅಂಜಲಿ ನಿಂಬಾಳ್ಕರ್ಗೆ ಎಲ್ಲಾ ದಾಖಲೆ ವಾಟ್ಸಪ್ ಮಾಡಿದ್ದು ನೋಡಿದ್ದಾರೆ. ಆದ್ರೆ, ಪರಿಹಾರ ಕೊಡಿಸಲು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ವಿಡಿಯೋ ಮಾಡಿ ಆಕ್ರೋಶ ಹೊರಹಾಕಿದ್ದಾರೆ. ತನಗೆ ಚಿಕ್ಕಚಿಕ್ಕ ಮಕ್ಕಳು ವೃದ್ಧ ತಂದೆ ಇದ್ದು ಬೀದಿಯಲ್ಲಿ ಕಳೆಯುವ ಪರಿಸ್ಥಿತಿ ಬಂದಿದೆ. ನನ್ನ ಮಕ್ಕಳ ಸ್ಥಿತಿ ಹೇಗಿದೆ ನೋಡಿ ಎಂದು ವಿಡಿಯೋ ಮಾಡಿ ಅಳಲು ತೋಡಿಕೊಂಡಿದ್ದಾರೆ.