ನಾನ್ ವೆಜ್ ಜಾಹೀರಾತುಗಳ ನಿಷೇಧ ಕೋರಿ ಅರ್ಜಿ: ತರಾಟೆಗೆ ತೆಗೆದುಕೊಂಡು ಹೈಕೋರ್ಟ್.!

ಮುಂಬೈ: ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳಲ್ಲಿ ಮಾಂಸ ಮತ್ತು ಮಾಂಸದ ಉತ್ಪನ್ನಗಳ ಜಾಹೀರಾತುಗಳ ಮೇಲೆ ನಿಷೇಧ ಕೋರಿ ಜೈನ ಸಂಸ್ಥೆಗಳು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಬಾಂಬೆ ಹೈಕೋರ್ಟ್ ನಡೆಸಿದ್ದು ಅರ್ಜಿದಾರರನ್ನು ತರಾಟೆಗೆ ತೆಗೆದುಕೊಂಡಿದೆ.

ಪ್ರಕರಣದ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದೀಪಂಕರ್ ದತ್ತ ಮತ್ತು ನ್ಯಾಯಮೂರ್ತಿ ಮಾಧವ್ ಜಾಮ್ದಾರ್ ಅವರ ಪೀಠವು ಈ ವಿಷಯವು ಶಾಸಕಾಂಗದ ವ್ಯಾಪ್ತಿಗೆ ಬರುತ್ತದೆ. ನಾವು ನಿಷೇಧವನ್ನು ವಿಧಿಸುವ ಕಾನೂನು ರೂಪಿಸಲು ಸಾಧ್ಯವಿಲ್ಲ ಎಂದು ಹೇಳಿದೆ.

ಮೂರು ಜೈನ ಧಾರ್ಮಿಕ ಚಾರಿಟಬಲ್ ಟ್ರಸ್ಟ್‌ಗಳು ಮತ್ತು ಜೈನ ಧರ್ಮವನ್ನು ಪಾಲಿಸುವ ಕೆಲವು ಮುಂಬೈ ನಿವಾಸಿಗಳು ಈ ಅರ್ಜಿಯನ್ನು ಸಲ್ಲಿಸಿದ್ದರು‌. ಮನವಿಯಲ್ಲಿ, ತಮ್ಮ ಮಕ್ಕಳು ಸೇರಿದಂತೆ ಅವರ ಕುಟುಂಬಗಳು ಇಂತಹ ಜಾಹೀರಾತುಗಳನ್ನು ವೀಕ್ಷಿಸಲು ಒತ್ತಾಯಿಸಲಾಗುತ್ತದೆ. ಶಾಂತಿಯುತವಾಗಿ ಬದುಕುವ ಹಕ್ಕನ್ನು ಉಲ್ಲಂಘಿಸುತ್ತಿದೆ. ಮತ್ತು ಮಕ್ಕಳ ಮನಸ್ಸನ್ನು ಹಾಳುಮಾಡುತ್ತದೆ ಎಂದು ಉಲ್ಲೇಖಿಸಿದ್ದರು.

ಇನ್ನು ವಿಚಾರಣೆ ವೇಳೆ ಅರ್ಜಿದಾರರನ್ನು ಟೀಕಿಸಿದ ಪೀಠ ಮೊದಲು ಇದು ನಮ್ಮ ಅಧಿಕಾರ ವ್ಯಾಪ್ತಿಯಲ್ಲಿದೆಯೇ ಎಂದು ನಮಗೆ ತಿಳಿಸಿ. ಯಾವುದನ್ನಾದರೂ ನಿಷೇಧಿಸಲು ನಿಯಮಗಳು ಮತ್ತು ಮಾರ್ಗಸೂಚಿಗಳನ್ನು ರೂಪಿಸಲು ನೀವು ಹೈಕೋರ್ಟ್‌ಗೆ ಕೇಳುತ್ತಿದ್ದೀರಿ. ಆದರೆ ಅದನ್ನು ಶಾಸಕಾಂಗ ನಿರ್ಧರಿಸುತ್ತದೆ ಎಂದು ತರಾಟೆಗೆ ತೆಗೆದುಕೊಂಡಿತು.

ಯಾವುದೇ ಹಕ್ಕಿನ ಉಲ್ಲಂಘನೆಯಾದಾಗ ಮಾತ್ರ ನಾವು ಹೈಕೋರ್ಟ್ ಆಗಿ ಮಧ್ಯಪ್ರವೇಶಿಸಬಹುದು. ಇಂತಹ ನಿಷೇಧವನ್ನು ಕೋರುವ ಮೂಲಕ ಅರ್ಜಿದಾರರು ಇತರೆ ಜನರ ಹಕ್ಕುಗಳನ್ನು ಪರಿಣಾಮಕಾರಿಯಾಗಿ ಅತಿಕ್ರಮಿಸಲಾಗುತ್ತಿಲ್ಲವೇ ಎಂದು ಪೀಠ ಪ್ರಶ್ನಿಸಿದೆ. ಸಂವಿಧಾನದ 19 ನೇ ವಿಧಿಯ ಉಲ್ಲಂಘನೆಯ ಬಗ್ಗೆ ಏನು ಗೊತ್ತು.? ನೀವು ಇತರರ ಹಕ್ಕುಗಳನ್ನು ಏಕೆ ಕಸಿದುಕೊಳ್ಳುತ್ತೀರಿ.? ನೀವು ಕೇಳುವದನ್ನು ಕಾನೂನಿನ ಮೂಲಕ ಒದಗಿಸಬೇಕು. ಇಲ್ಲಿ ಅಂತಹ ಯಾವುದೇ ಕಾನೂನು ಇಲ್ಲ. ಅದಕ್ಕಾಗಿಯೇ ನೀವು ಕಾನೂನನ್ನು ರೂಪಿಸಲು ನಮ್ಮನ್ನು ಕೇಳುತ್ತಿದ್ದೀರಿ. ಕಾನೂನು ರೂಪಿಸಲು ನಮಗೆ ಸಾಧ್ಯವಿಲ್ಲ ಎಂದು ಪೀಠ ಹೇಳಿದೆ.