ಕೊಪ್ಪಳ: ವಿಮಾನ ಹಾರಿದ್ದು ಆಯಿತು, ಈಗ ದ್ರೋಣ್ ಹಾರಾಟ!

ಕೊಪ್ಪಳ (ಜೂ.4) : ವಿಮಾನ ಹಾರಾಟ ಮಾಡಿದ್ದು ಆಯಿತು, ಅದು ಖನಿಜ ಪತ್ತೆಗೆ ಎನ್ನುವ ಮಾಹಿತಿ ಜಿಲ್ಲಾಡಳಿತ ಅಧಿಕೃತವಾಗಿಯೂ ನೀಡಿತು. ಆದರೆ, ಈಗ ಕೊಪ್ಪಳ ಜಿಲ್ಲಾದ್ಯಂತ ವಿಮಾನ ಮಾದರಿಯ ದ್ರೋಣ್ ಹಾರಾಟ ನಡೆಸಿವೆ. ಇದು ಗ್ರಾಮೀಣ ಭಾಗದಲ್ಲಿ ರೈತರಲ್ಲಿ ಕುತೂಹಲ ಹೆಚ್ಚಿಸಿದೆ.

ಪುಟ್ಟವಿಮಾನ ಮಾದರಿಯ ದ್ರೋಣ್‌ಗಳನ್ನು ಹೊಲಗಳಲ್ಲಿ ಹಾರಾಟ ಮಾಡಿ ಸರ್ವೇ ಮಾಡಲಾಗುತ್ತದೆ. ಕೆಳಗೆ ಇಳಿಸಲಾಗುವುದನ್ನು ನೋಡಲು ಗ್ರಾಮೀಣ ಪ್ರದೇಶದ ಜನರು ಮುಗಿ ಬೀಳುತ್ತಿದ್ದಾರೆ. ಒಂದೆರಡಲ್ಲ ಹತ್ತಾರು ಕಡೆಯೂ ಹೀಗೆಯೇ ಸರ್ವೇಗಾಗಿ ಹಾರಾಟ ಮಾಡಲಾಗುತ್ತದೆ. ಇವುಗಳು ಹಾರಾಟ ಮಾಡುತ್ತಲೇ ಭೂಮಿಯ ಸರ್ವೇ ಮಾಡುತ್ತವೆ. ಇದಕ್ಕಾಗಿ ಸಿಬ್ಬಂದಿಗಳು ಇದ್ದಾರೆ.

ಈ ಸಿಬ್ಬಂದಿಗಳ ಜತೆಗೆ ರೈತರು ಕುತೂಹಲದಿಂದ ಚರ್ಚೆ ಮಾಡುತ್ತಿದ್ದಾರೆ. ಇತ್ತೀಚಿಗೆ ಹಾರಾಟ ಮಾಡಿದ ವಿಮಾನಗಳು ಸರ್ವೇ ಮಾಡಿದ ಮುಂದಿನ ಭಾಗವಾಗಿ ಈ ದ್ರೋಣ್ ಹಾರಾಟ ಮಾಡಲಾಗುತ್ತದೆಯೇ ಎಂದೆಲ್ಲ ಪ್ರಶ್ನೆ ಮಾಡುತ್ತಿದ್ದಾರೆ.

ಕೆಲವರಂತೂ ಖನಿಜ ಪತ್ತೆಯಾಗಿದೆಯಂತೆ ಅದಕ್ಕಾಗಿಯೇ ಕೆಳಹಂತದಲ್ಲಿ ವಿಮಾನ ಹಾರಾಟದ ಬಳಿಕ ಈಗ ದ್ರೋಣ್ ಮೂಲಕ ಸರ್ವೇ ಮಾಡಲಾಗುತ್ತದೆ ಎಂದೆಲ್ಲ ಮಾತಾಡುತ್ತಿದ್ದಾರೆ. ಇನ್ನೂ ಕೆಲವರು ಚಿನ್ನದ ನಿಕ್ಷೇಪ ಇದೆ ಎಂದು ಸಹ ಮಾತನಾಡಿಕೊಳ್ಳುತ್ತಾರೆ. ಏನೇ ಆಗಲಿ, ಈ ದ್ರೋಣ್‌ಗಳ ಹಾರಾಟ ಮಾತ್ರ ನಾನಾ ಚರ್ಚೆ ಹುಟ್ಟು ಹಾಕಿರುವುದಂತೂ ನಿಜ.

ಭೂಮಿಯ ಸರ್ವೇ:

ಇದು ಕೇಂದ್ರ ಸರ್ಕಾರ ನಡೆಸುವ ಭೂಮಿಯ ಸರ್ವೇಯಾಗಿದೆ. ಪ್ರತಿ 30 ವರ್ಷಗಳಿಗೊಮ್ಮೆ ಈ ರೀತಿಯ ಭೂಮಿ ಸರ್ವೇ ಮಾಡಲಾಗುತ್ತದೆ. ಈ ಹಿಂದೆ ತಂತ್ರಜ್ಞಾನ ಅಷ್ಟಾಗಿ ಇಲ್ಲದೆ ಇರುವುದರಿಂದ ಸಿಬ್ಬಂದಿಗಳ ಮೂಲಕ ಸರ್ವೇ ಮಾಡಿಸಲಾಗುತ್ತಿತ್ತು. ಆದರೆ, ಈಗ ತಂತ್ರಜ್ಞಾನ ಮುಂದುವರೆದ ಭಾಗವಾಗಿ ಭೂಮಿಯ ಸರ್ವೇ ದ್ರೋಣ್‌ಗಳ ಮೂಲಕ ಮಾಡಿಸಲಾಗುತ್ತದೆ. ಇದಕ್ಕೇ ರಾಜ್ಯ ಸರ್ಕಾರವೂ ಅನುಮತಿ ನೀಡಿದೆ. ಅನುಮತಿಯ ಆಧಾರದಲ್ಲಿಯೇ ಖಾಸಗಿ ಎಜೆನ್ಸಿ ಭೂಮಿಯ ಸರ್ವೇ ಮಾಡುತ್ತದೆ. ಹೀಗೆ ಭೂಮಿ ಸರ್ವೇ ಮಾಡುತ್ತಿರುವುದು ಮುಂದಿನ ದಿನಗಳಲ್ಲಿ ಇನ್ನು ರೈತರಿಗೆ ಅನುಕೂಲಕರವಾಗುವ ದಿಸೆಯಲ್ಲಿ ಇದನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ ಎನ್ನಲಾಗುತ್ತಿದೆ.