ಪ್ರವೀಣ್ ನೆಟ್ಟಾರು ಪತ್ನಿಗೆ ನೌಕರಿ ನೀಡಿ ಸರ್ಕಾರದಿಂದ ಆದೇಶ: ಜನಸ್ಪಂದನ ಸಭೆಯಲ್ಲಿ ಘೋಷಿಸಿದಂತೆ ನಡೆದುಕೊಂಡ ಸಿಎಂ

ಬೆಂಗಳೂರು: ದುಷ್ಕರ್ಮಿಗಳಿಂದ ಹತ್ಯೆಗೊಳಗಾಗಿದ್ದ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಅವರ ಪತ್ನಿ ನೂತನ ಕುಮಾರಿ ಎಂ. ಅವರಿಗೆ ಗುತ್ತಿಗೆ ಆಧಾರಿತ ಹಿರಿಯ ಸಹಾಯಕ ಹುದ್ದೆ ನೀಡಿ ಗುರುವಾರ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ದೊಡ್ಡಬಳ್ಳಾಪುರದಲ್ಲಿ ನಡೆದಿದ್ದ ಜನಸ್ಪಂದನ ಸಮಾವೇಶದಲ್ಲಿ ಈ ಬಗ್ಗೆ ಸಿಎಂ ಬೊಮ್ಮಾಯಿ ಭರವಸೆ ನೀಡಿದ್ದರು. ಕೊಟ್ಟ ಮಾತಿನಂತೆ ಇದೀಗ ಸಿ ಗ್ರೂಪ್ ಹುದ್ದೆಗೆ ಗುತ್ತಿಗೆ ಆಧಾರದಲ್ಲಿ ನೇಮಿಸಿ ರಾಜ್ಯ ಸರ್ಕಾರದಿಂದ ಅಧಿಕೃತವಾಗಿ ಆದೇಶ ಹೊರಡಿಸಲಾಗಿದೆ.

ಇನ್ನು ಈ ಹಿಂದೆ ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ಬಿಜೆಪಿ ಪಕ್ಷದಿಂದ 25 ಲಕ್ಷ ರೂಪಾಯಿ ಹಾಗೂ ಸರ್ಕಾರದಿಂದ 25 ಲಕ್ಷ ರೂ. ಪರಿಹಾರ ನೀಡಲಾಗಿತ್ತು. ಅಷ್ಟೇ ಅಲ್ಲದೇ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು 5 ಲಕ್ಷ ರೂ. ಪರಿಹಾರವನ್ನು ನೀಡಿದ್ದರು.

ಈ ಬಗ್ಗೆ ಬಿಜೆಪಿ ಅಧಿಕೃತ ಫೇಸ್ಬುಬುಕ್ ಪೇಜ್ ನಲ್ಲಿ ಮಾಹಿತಿ ಹಂಚಿಕೊಂಡಿದೆ. ಪಕ್ಷದ ಕಾರ್ಯಕರ್ತರೇ ಬಿಜೆಪಿ ಪಕ್ಷದ ಜೀವಾಳ. ಕಾರ್ಯಕರ್ತರ ಹಿತರಕ್ಷಣೆಗೆ ಬಿಜೆಪಿ ಬದ್ಧವಾಗಿದೆ ಎಂದು ಶೇರ್ ಮಾಡಿದೆ.