ಗದಗ: ಶಾಲೆಯ ಕಟ್ಟಡದ ಫಿಟ್ನೆಸ್ ಸರ್ಟಿಫಿಕೇಟ್ ಕೊಡಲು ಲಂಚ ಕೇಳಿದ್ದ ಜಿಲ್ಲಾ ಮಟ್ಟದ ಅಧಿಕಾರಿಯೊಬ್ಬರು ಲೋಕಾಯುಕ್ತರ ಬಲೆಗೆ ಬಿದ್ದ ಘಟನೆ ನಗರದ ಅಗ್ನಿಶಾಮಕ ದಳ ಕಛೇರಿಯಲ್ಲಿ ನಡೆದಿದೆ. ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಶಿಗ್ಲಿ ಗ್ರಾಮದ ಎಸ್.ಎಸ್ ಕೂಡ್ಲಮಠ ಶಾಲೆಯ ಕಟ್ಟಡದ ಗುಣಮಟ್ಟದ ಸುರಕ್ಷತಾ ಪ್ರಮಾಣ ಪತ್ರ ಕೊಡಬೇಕಿತ್ತು. ಅದಕ್ಕೆ ಅಗ್ನಿಶಾಮಕದಳ ಅಧಿಕಾರಿ ಎನ್.ಎಸ್ ಕಗ್ಗಲಗೌಡರ ಎಂಬುವವರು 7 ಸಾವಿರ ರೂಪಾಯಿ ಲಂಚ ಕೇಳಿದ್ದರು ಎಂಬ ಆರೋಪವಿತ್ತು.
ಶಿಗ್ಲಿ ಶಾಲೆಯ ಮುಖ್ಯೋಪಾಧ್ಯಾಯ ಸಿ.ಬಿ ಮೊಗಲಿ ಎಂಬುವರು ಲೋಕಾಯುಕ್ತರ ಕಚೇರಿಗೆ ದೂರು ನೀಡಿದ್ದರು. ದೂರನ್ನು ಆಧರಿಸಿ ಹಣ ಪಡೆಯುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ ವಶಕ್ಕೆ ಪಡೆದಿದ್ದಾರೆ. ಲೋಕಾಯುಕ್ತ ಎಸ್ಪಿ ಸತೀಶ್ ಚಿಟಗುಪ್ಪಿ, ಡಿವೈಎಸ್ಪಿ ಶಂಕರ್ ಎಮ್ ರಾಗಿ ಅವರ ಮಾರ್ಗದರ್ಶನದಲ್ಲಿ ಇನ್ಸ್‌ಪೆಕ್ಟರಗಳಾದ ರವಿ ಪುರುಷೋತ್ತಮ್ ಹಾಗೂ ಆಜೀಜ್ ಕಲಾದಗಿ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.
ಅಗ್ನಿಶಾಮಕ ದಳ ಅಧಿಕಾರಿ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗ್ತಿದೆ. ಈ ಕುರಿತು ಗದಗ ಲೋಕಾಯುಕ್ತ ಕಚೇರಿಯಲ್ಲಿ ಪ್ರಕರಣ ದಾಖಲಾಗಿದೆ. ಈ ವೇಳೆ ಸಿಬ್ಬಂದಿಗಳಾದ ವಿರೂಪಾಕ್ಷ ಅರಿಶಿಣದ, ಎಸ್.ಎಸ್ ಅಮರಶೆಟ್ಟಿ, ಮಂಜುನಾಥ್ ಗಾರ್ಗಿ, ಲಕ್ಕನಗೌಡರ್ ಹಲವರು ಈ ಕಾರ್ಯಾಚರಣೆಯಲ್ಲಿ ಉಪಸ್ಥಿತರಿದ್ದರು.