ಕೆಇಎ ಎಡವಟ್ಟಿನಿಂದ ರಿಪೀಟರ್ಸ್ ವಿದ್ಯಾರ್ಥಿಗಳ ಭವಿಷ್ಯ ಅತಂತ್ರ.!

ಬೆಂಗಳೂರು: ಕೆಇಎ ಎಡವಟ್ಟಿನಿಂದ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ಅಡಕತ್ತರಿಗೆ ಸಿಕ್ಕಂತಾಗಿದೆ.ಕೋರ್ಟ್ ಆದೇಶವನ್ನ ಪ್ರಶ್ನಿಸಿ ಕೆಇಎ ಮತ್ತೆ ಮೇಲ್ಮನವಿಯನ್ನು ಸಲ್ಲಿಸಲು‌ ಮುಂದಾಗಿದೆ.ಹೀಗಾಗೀ ಸಿಇಟಿ ರ್ಯಾಂಕಿಂಗ್ ವಿಚಾರದಲ್ಲಿ ಸರ್ಕಾರ ಮತ್ತು  ವಿದ್ಯಾರ್ಥಿಗಳ ನಡುವೆ ಶೀತಲ ಸಮರ ಉಂಟಾಗಿದೆ.

ಕೆಇಎ ಯಡವಟ್ಟಿಗೆ ರಿಪೀಟರ್ಸ್ ವಿದ್ಯಾರ್ಥಿಗಳ ಭವಿಷ್ಯ ಅತಂತ್ರ.!

ಸರ್ಕಾರ ಮತ್ತು ಸಿಇಟಿ ಪುನರಾವರ್ತಿತ ವಿದ್ಯಾರ್ಥಿಗಳ ನಡುವಿನ ಹಗ್ಗಜಗ್ಗಾಟ ಮುಂದುವರಿದಿದೆ. ಪಿಯುಸಿ ಅಂಕ ಪರಿಗಣಿಸಿ ಎಂದು ಹೈಕೋರ್ಟ್ ಆದೇಶ ನೀಡಿದರೂ ಇದಕ್ಕೆ ಕೆಇಎ ಬೋರ್ಡ್ ಕ್ಯಾರೇ ಎನ್ನುತ್ತಿಲ್ಲ. ಸಿಇಟಿ ಪರೀಕ್ಷೆಯಿಂದ 75 ಅಂಕ ಹಾಗೂ 25 ಪಿಯುಸಿ ಅಂಕ ಪರಿಗಣಿಸಬಹುದೇ ನೋಡಿ ಎಂಬ ಸಲಹೆಯನ್ನ ಕೋರ್ಟ್ ಕೆಇಎಗೆ ನೀಡಿತ್ತು. ಈ ಸಲಹೆಯನ್ನ ಕೆಇಎ ಒಪ್ಪದೇ. ಈಗ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲು ಮುಂದಾಗಿದೆ. ಕೆಇಎ ನಿರ್ದೇಶಕರು, ಕಾನೂನು ತಜ್ಞರ ಜೊತೆ ಸಚಿವ ಅಶ್ವಥ್ ನಾರಾಯಣ ಸಭೆ ನಡೆಸಿದ್ದು, ಮೇಲ್ಮನವಿ ಸಲ್ಲಿಸಲು ಮುಂದಾಗಿದ್ದಾರೆ.‌ ಇದರ ವಿರುದ್ಧ ವಿದ್ಯಾರ್ಥಿಗಳು ಮತ್ತವರ ಪೋಷಕರು ಸಿಡಿದೆದ್ದಿದ್ದಾರೆ.

ಸಿಇಟಿ ರ್ಯಾಂಕಿಂಗ್ ನ ವಿವಾದ ಏನು.?

ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ 2020-21 ನೇ ಸಾಲಿನ ದ್ವಿತೀಯ ಪಿಯುನಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳು ಗಳಿಸಿದ ಶೇ. 50 ಹಾಗೂ ಸಿಇಟಿಯಲ್ಲಿ ಪಡೆದ ಶೇ. 50 ರಷ್ಟು ಅಂಕಗಳನ್ನು ಪರಿಗಣಿಸಿ ಹೊಸದಾಗಿ ರ‍್ಯಾಂಕ್ ಪಟ್ಟಿ ಪ್ರಕಟಿಸಬೇಕು ಎಂದು ಹೈಕೋರ್ಟ್ ತಿಳಿಸಿತ್ತು. ಆದರೆ ಕೆಇಎ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ 2020-21 ನೇ ಸಾಲಿನ ಪಿಯು ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ಪರಿಗಣಿಸಲಾಗದು ಎಂದು  ಜುಲೈ 30 ರಂದು ಆದೇಶ ಹೊರಡಿಸಿತ್ತು.

ಈ ವಿಚಾರದ ಕುರಿತು ಕೆಇಎ ಏನ್ ಹೇಳುತ್ತೆ.?

ನ್ಯಾಯಾಲಯದ ಮೊರೆ ಹೋದವರು ತಾಂತ್ರಿಕ ಅಂಶಕ್ಕೆ ಬದ್ಧರಾಗಿದ್ದಾರೆ. ಕಳೆದ ವರ್ಷ ಸಾಂಕ್ರಾಮಿಕ ರೋಗದ ದೃಷ್ಟಿಯಿಂದ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಹೈಕೋರ್ಟ್‌ನ ಆದೇಶ ಜಾರಿಯಾದರೆ ಈಗಿನ 3 ಲಕ್ಷ ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದೆ. ಕಳೆದ ವರ್ಷದ ವಿದ್ಯಾರ್ಥಿಗಳ ಪಿಯು ಅಂಕಗಳನ್ನು ಪರಿಗಣನೆಗೆ ತೆಗೆದುಕೊಂಡರೆ ಪ್ರಸ್ತುತ ವರ್ಷದ ವಿದ್ಯಾರ್ಥಿಗಳು ಗಳಿಸಿದ ರ‍್ಯಾಂಕಿಂಗ್ ಗಣನೀಯವಾಗಿ ಕುಸಿಯುತ್ತದೆ. ಸಾಂಕ್ರಾಮಿಕ ರೋಗದಿಂದಾಗಿ ಕಳೆದ ವರ್ಷ ಪರೀಕ್ಷೆಗಳು ನಡೆಯದ ಕಾರಣ, ಎಲ್ಲಾ ವಿದ್ಯಾರ್ಥಿಗಳು ತಮ್ಮ ಎಸ್.ಎಸ್.ಎಲ್.ಸಿ ಮತ್ತು ಪಸ್ಟ್ ಪಿಯು ಅಂಕಗಳ ಆಧಾರದ ಮೇಲೆ ಉತ್ತೀರ್ಣರಾಗಿದ್ದಾರೆ. ಇದರಿಂದ ಹೆಚ್ಚಿನ ವಿದ್ಯಾರ್ಥಿಗಳು ಶೇ. 90-95 ಕ್ಕಿಂತ ಹೆಚ್ಚು ಅಂಕ ಗಳಿಸಿದ್ದಾರೆ. ಆದ್ದರಿಂದ ಈಕ್ರಮ ಸರಿಯಲ್ಲ ಎಂದು ಕೆಇಎ ಹೇಳುತ್ತದೆ.

ಹೈಕೋರ್ಟ್ ಹೇಳೋದೇನು.?

ಇತರ ಪದವಿಪೂರ್ವ ಕೋರ್ಸ್‌ಗಳಿಗೆ ಪಿಯು ಅಂಕಗಳನ್ನು ಪರಿಗಣಿಸುವ ನಿರ್ಧಾರವು ಎಂಜಿನಿಯರಿಂಗ್ ಮತ್ತು ತಾಂತ್ರಿಕ ಕೋರ್ಸ್‌ಗಳಿಗೆ ಅನ್ವಯಿಸುವುದಿಲ್ಲ. ಇದು ತಾರತಮ್ಯ, ಅನಿಯಂತ್ರಿತ ಮತ್ತು ಅಭ್ಯರ್ಥಿಗಳಿಗೆ ಅನ್ಯಾಯ ಮತ್ತು ಅಸಮಂಜಸವಾಗಿದೆ. ಈ ನಿರ್ಧಾರವನ್ನು ಪುನರಾವರ್ತಿತರಿಗೆ ಮುಂಚಿತವಾಗಿ ತಿಳಿಸಲು ಕೆಇಎ ವಿಫಲವಾದ ಕಾರಣ ಅವರು ಅರ್ಹತಾ ಪರೀಕ್ಷೆಯನ್ನು ಮರುಪಡೆಯುವ ಅವಕಾಶವನ್ನು ತಡೆಯಲಾಗಿದೆ.

ಸದ್ಯ ಸಿಇಟಿ ರ‍್ಯಾಂಕಿಂಗ್ ನಿಂದ 24 ಸಾವಿರ ವಿದ್ಯಾರ್ಥಿಗಳಿಗೆ ಗೊಂದಲ ಉಂಟಾಗಿದ್ದು, ಕೋರ್ಟ್ ಆದೇಶ ಪಾಲನೆ ಮಾಡುವಂತೆ ಕೆಇಎಗೆ ವಿದ್ಯಾರ್ಥಿಗಳು ಮತ್ತು ಪೋಷಕರು ಒತ್ತಾಯಿಸುತ್ತಿದ್ದಾರೆ. ಇದೀಗ ಸರ್ಕಾರ VS ವಿದ್ಯಾರ್ಥಿಗಳು ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಬ್ಬರ ನಡುವಿನ ಫೈಟ್ ತಾರಕಕ್ಕೇರಿದ್ದು, ಮುಂದೆ ಈ ಹೋರಾಟ ಎಲ್ಲಿಗೆ ಹೋಗಿ ನಿಲ್ಲುತ್ತೆ ಎನ್ನುವುದನ್ನ ಕಾದು ನೋಡಬೇಕಿದೆ.