ಪತ್ನಿಯನ್ನೇ ಮಚ್ಚಿನಿಂದ ಕೊಚ್ಚಿ ಕೊಂದ ಕುಡುಕ ಪತಿರಾಯ.!

ಹಾಸನ: ಪತಿಯೇ ಪತ್ನಿಯನ್ನು ಮಚ್ಚಿನಿಂದ ಕೊಚ್ಚಿ ಹತ್ಯೆ ಮಾಡಿರುವ ಹೀನಾಯ ಘಟನೆ ಬೇಲೂರು ತಾಲೂಕಿನ ಚೀಕನಹಳ್ಳಿ ಗ್ರಾಮದಲ್ಲಿ ನಡೆದಿದೆ. ಇಂದ್ರಮ್ಮ (48) ಕೊಲೆಯಾದ ಮಹಿಳೆ. ಪತಿ ಚಂದ್ರಯ್ಯ ಕೊಲೆ ಮಾಡಿ ಎಸ್ಕೇಪ್ ಆಗಿರುವ ಆರೋಪಿ.

ಮಂಗಳವಾರ ಬೆಳಿಗ್ಗೆ ಇಂದ್ರಮ್ಮ ನಾಲ್ವರ ಜೊತೆ ಕಾಫಿ ತೋಟದ ಕೆಲಸಕ್ಕೆ ತೆರಳುತ್ತಿದ್ದಳು. ಈ ವೇಳೆ ಮಾರಕಾಸ್ತ್ರ ಹಿಡಿದು ಏಕಾಏಕಿ ದಾಳಿ ಮಾಡಿದ ಚಂದ್ರಯ್ಯ ತನ್ನ ಪತ್ನಿಯನ್ನು ಮನಸ್ಸೋ ಇಚ್ಚೆ ಕೊಚ್ಚಿ ಕೊಲೆ ಗೈದಿದ್ದಾನೆ. ಇಂದ್ರಮ್ಮನ ಜೊತೆಗಿದ್ದ ಮಹಿಳೆಯೊಬ್ಬಳು ಕಾಪಾಡಲು ಮುಂದಾದಾಗ, ಅವಳ ಮೇಲೂ ಚಂದ್ರಯ್ಯ ಹಲ್ಲೆ ಮಾಡಿದ್ದಾನೆ.

ಚಂದ್ರಯ್ಯ-ಇಂದ್ರಮ್ಮನ ನಡುವೆ ಆಗಾಗ್ಗೆ ಜಗಳ ನಡೆಯುತ್ತಿದ್ದು, ಆರು ತಿಂಗಳ ಹಿಂದೆಯು ಪತ್ನಿಯನ್ನು ನೇಣು ಹಾಕಿ ಕೊಲ್ಲಲು ಯತ್ನಿಸಿದ್ದ ಎನ್ನಲಾಗಿದೆ. ಕಳೆದ ರಾತ್ರಿ ಕಂಠಪೂರ್ತಿ ಕುಡಿದು ಬಂದಿದ್ದ ಚಂದ್ರಯ್ಯ ಪತ್ನಿ ಜೊತೆ ಜಗಳವಾಡಿದ್ದ. ಈ ವೇಳೆ ಪುತ್ರ ಪ್ರದೀಪ್ ಜಗಳ ಬಿಡಿಸಿ ಇಬ್ಬರಿಗೂ ಬುದ್ದಿ ಹೇಳಿದ್ದ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದು, ಅರೇಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.