ಹುಬ್ಬಳ್ಳಿ: ಹುಬ್ಬಳ್ಳಿ – ಅಂಕೋಲಾ ರೈಲು ಮಾರ್ಗ ಅಭಿವೃದ್ಧಿಗೆ ಪೂರಕವಾಗಲಿದೆ. ಅಲ್ಲದೇ ಗೋವಾ, ಕಾರವಾರ ಹಾಗೂ ಮಂಗಳೂರು ಬಂದರುಗಳಿಂದ ವಿದೇಶ ವ್ಯಾಪಾರಕ್ಕೆ ಸಹಕಾರಿಯಾಗಲಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ, ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.
ಹುಬ್ಬಳ್ಳಿಯ ಸರ್ಕ್ಯೂಟ್ ಹೌಸ್ ನಲ್ಲಿಂದು ಹುಬ್ಬಳ್ಳಿ – ಅಂಕೋಲಾ ರೈಲು ಮಾರ್ಗದ ಕುರಿತು ರಾಷ್ಟ್ರೀಯ ವನ್ಯಜೀವಿ ಮಂಡಳಿಯ ತಜ್ಞರ ತಂಡದೊಂದಿಗೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಅಧಿಕಾರಿಗಳ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ಈ ಮಾರ್ಗದಿಂದ ಸಾರಿಗೆ ವೆಚ್ಚ ಸಹ ತಗ್ಗಲಿದೆ. ದೇಶದ ದೊಡ್ಡದಾದ ಸೀಬರ್ಡ್ ನೌಕಾನೆಲೆಗೆ ಉಪಯುಕ್ತಕರವಾಗಲಿದೆ.
ಜಾಗತಿಕ ಮಟ್ಟದಲ್ಲಿ ದೇಶದ ಉತ್ಪನ್ನಗಳು ಗುರುತಿಸಿಕೊಳ್ಳಲು ಮತ್ತು ವಹಿವಾಟು ನಡೆಸಲು ಈ ರೈಲ್ವೆ ಮಾರ್ಗ ಅವಶ್ಯಕವಾಗಿ ಬೇಕಾಗಿದೆ. ಲಾಜಿಸ್ಟಿಕ್ ವೆಚ್ಚವು ಬೇರೆ ದೇಶಗಳಿಗೆ ಹೋಲಿಸಿದರೆ ದೇಶದಲ್ಲಿ ಹೆಚ್ಚಾಗಿದೆ. ಅರಣ್ಯ ಸಂಪತ್ತು, ವನ್ಯ ಮೃಗಗಳು, ಜಲಚರಗಳಿಗೆ ಆದ್ಯತೆ ಇರಬೇಕು. ನಮ್ಮ ದೇಶದ ಆರ್ಥಿಕತೆಯು 2025ಕ್ಕೆ 5 ಟ್ರಿಲಿಯನ್ ಮತ್ತು 2047 ಕ್ಕೆ 32 ಟ್ರಿಲಿಯನ್ ಡಾಲರ್ 10 ಪಟ್ಟು ಹೆಚ್ಚಾಗಬೇಕಿದೆ. ದೇಶವು ಜಗತ್ತಿನಲ್ಲಿ ಎರಡನೇ ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ. ಹೀಗಾಗಿ ಕೈಗಾರಿಕೆಗಳು, ಉದ್ಯೋಗಾವಕಾಶ ಸೇರಿದಂತೆ ಇತರೆ ಜನರ ಅವಶ್ಯಕತೆಗಳನ್ನು ಪೂರೈಸಬೇಕಾಗಿದೆ. ರೈಲು ಮಾರ್ಗದ ಕುರಿತು ತಂಡದೊಂದಿಗೆ ಚರ್ಚಿಸಲಾಗಿದೆ ಎಂದರು.