ಚಾಮರಾಜನಗರ: ದೇಶದಾದ್ಯಂತ ರಾಹುಲ್ ಗಾಂಧಿ ನೇತೃತ್ವದಲ್ಲಿ ಆರಂಭಗೊಂಡಿರುವ ಭಾರತ್ ಜೋಡೋ ಯಾತ್ರೆ ಕರ್ನಾಟಕಕ್ಕೆ ಆಗಮಿಸಿದೆ. ಕೇರಳದಲ್ಲಿ ಯಶಸ್ವಿ ಯಾತ್ರೆಯನ್ನು ಪೂರೈಸಿದ್ದು ಇಂದಿನಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಯಾತ್ರೆ ಸಂಚರಿಸಲಿದೆ. ಬೆಳಗ್ಗೆ 9 ಗಂಟೆ ಸುಮಾರಿಗೆ ಚಾಮರಾಜನಗರದ ಗುಂಡ್ಲುಪೇಟೆಗೆ ಆಗಮಿಸಿದ ರಾಹುಲ್ ಗಾಂಧಿಯನ್ನ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಮಾಜಿ ಸಿಎಂ ಸಿದ್ಧರಾಮಯ್ಯ ಸೇರಿದಂತೆ ರಾಜ್ಯ ಕಾಂಗ್ರೆಸ್ ಮುಖಂಡರು ಅದ್ಧೂರಿಯಾಗಿ ಸ್ವಾಗತಿಸಿದರು.
ಹುಲಿ ಸಂರಕ್ಷಿತ ಅರಣ್ಯದಲ್ಲಿ ಪಾದಯಾತ್ರೆಗೆ ಅರಣ್ಯ ಇಲಾಖೆ ಅನುಮತಿ ನಿರಾಕರಿಸಿದ್ದ ಹಿನ್ನೆಲೆಯಲ್ಲಿ ತಮಿಳುನಾಡಿನ ಗುಡಲೂರಿನಿಂದ ಕರ್ನಾಟಕದ ಗುಂಡ್ಲುಪೇಟೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಹನದಲ್ಲಿ ಬಂದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅರಣ್ಯದಲ್ಲಿಯೇ ಕಾರು ನಿಲ್ಲಿಸಿ ರಾಹುಲ್ ಗಾಂಧಿ ಅವರನ್ನು ಸ್ವಾಗತಿಸಿದರು.
ಉಪಹಾರ ಸೇವಿಸಿದ ರಾಹುಲ್ ಗಾಂಧಿ ಗುಂಡ್ಲುಪೇಟೆಯಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಸುಮಾರು 30 ಸಾವಿರ ಕಾರ್ಯಕರ್ತರಿಗೆ ಊಟದ ವ್ಯವಸ್ಥೆ ಮಾಡಿದೆ. ವೆಜ್ ಪಲಾವ್, ಅನ್ನ ಸಾಂಬಾರ್, ಜಿಲೇಬಿ, ಹಪ್ಪಳ, ಉಪ್ಪಿನಕಾಯಿ ಸಿದ್ಧವಾಗುತ್ತಿದೆ. ವಿಐಪಿ, ವಿವಿಐಪಿಗಳಿಗೆ ಇದರ ಜೊತೆಗೆ ಶ್ಯಾವಿಗೆ ಪಾಯಸ ಹಾಗೂ ಮುದ್ದೆ ಇರುತ್ತದೆ. ಗುಂಡ್ಲುಪೇಟೆ ಪಟ್ಟಣದ ವೀರನಪುರದಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ. ಬೆಳಿಗ್ಗೆ 11 ರಿಂದಲೇ ಊಟ ಬಡಿಸುವ ಕೆಲಸ ಆರಂಭವಾಗಲಿದೆ.