ಬೆಂಗಳೂರು: ರಾಜ್ಯದ 9 ಕಡೆಗಳಲ್ಲಿ ಆರ್ ಟಿಓ ಚೆಕ್ ಪೋಸ್ಟ್ ಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸುತ್ತಿದ್ದಾರೆ. ಒಂಭತ್ತು ಜಿಲ್ಲೆಗಳಲ್ಲಿ ಬೆಳಗ್ಗೆ 4 ಗಂಟೆಯಿಂದ ದಾಳಿ ನಡೆಸಿ ಪರಿಶೀಲನೆ ಮಾಡುತ್ತಿದ್ದಾರೆ.
ಬೆಂಗಳೂರು, ಅತ್ತಿಬೆಲೆ, ವಿಜಯಪುರದ ಜಳಲಿ ಪೋಸ್ಟ್, ಬೆಳಗಾವಿಯ ನಿಪ್ಪಾಣಿ, ಚಿಕ್ಕಬಳ್ಳಾಪುರದ ಬಾಗೇಪಲ್ಲಿ, ಕೋಲಾರದ ನಂಗ್ಲಿ, ಬಳ್ಳಾರಿ, ಕೊಪ್ಪಳ, ಹೊಸಪೇಟೆ, ಗುಂಡ್ಲುಪೇಟೆ, ಬೀದರ್ ನ ಹುಮನಬಾದ್ ಚೆಕ್ ಪೋಸ್ಟ್ ಮೇಲೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಮಧ್ಯವರ್ತಿಗಳು ಹಾಗೂ ಲಂಚಕ್ಕೆ ಬೇಡಿಕೆ ದೂರುಗಳು ಹೆಚ್ಚಾದ ಹಿನ್ನೆಲೆಯಲ್ಲಿ ಸುಮೋಟೋ ಪ್ರಕರಣ ದಾಖಲಿಸಿಕೊಂಡು ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಅತ್ತಿಬೆಲೆ ಆರ್ ಟಿಒ ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ಬೆಳ್ಳಂಬೆಳಗ್ಗೆ 4 ಗಂಟೆಗೆ ರೈಡ್ ಮಾಡಿದ್ದಾರೆ. ಈ ಆರ್ ಟಿಒ ಕಚೇರಿ ಮೇಲೆ ಹಲವು ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದ್ದು, ಕಚೇರಿಯಲ್ಲಿರುವ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.
ಬೀದರ್ ನ ಹುಮನಾಬಾದ ಪಟ್ಟಣದ ಹೊರವಲಯದ ಆರ್.ಟಿ.ಓ ಕಚೇರಿಯ ಮೇಲೆ ಹಣ ವಸೂಲಿ ದೂರುಗಳು ಬಂದ ಹಿನ್ನೆಲೆಯಲ್ಲಿ ಕಲಬುರಗಿ ಲೋಕಾಯುಕ್ತ ಅಧಿಕಾರಿಗಳ ನೇತೃತ್ವದಲ್ಲಿ ದಾಳಿ ನಡೆದಿದೆ. ರಾಷ್ಟ್ರೀಯ ಹೆದ್ದಾರಿ 65 ರ ಮೋಳಕೆರಾ ಗ್ರಾಮದ ಹತ್ತಿರದ ಚೆಕ್ ಪೋಸ್ಟ್ ನಲ್ಲಿ ದಾಳಿ ನಡೆದಿದೆ. ಇನ್ನೂ ಕಾಂಗ್ರೆಸ್ ನ ಭಾರತ್ ಜೋಡೋ ಯಾತ್ರೆ ನಡೆಯುತ್ತಿರುವ ಗುಂಡ್ಲು ಪೇಟೆ ಚೆಕ್ ಪೋಸ್ಟ್ ಬಳಿಯಲ್ಲಿಯೂ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ.