ಮುಂಗಾರು ಆರಂಭಕ್ಕೆ ದಿನಗಣನೆ : ಕೃಷಿ ಚಟುವಟಿಕೆಗಾಗಿ ಹೊಲ, ಗದ್ದೆಗಳನ್ನು ಉಳುಮೆ ಮಾಡುತ್ತಿರುವ ಹಳಿಯಾಳ ತಾಲ್ಲೂಕಿನ ರೈತರು

ಹಳಿಯಾಳ : ನಾಳೆ ನಾವಿರುತ್ತೇವೆ ಎಂಬ ನಂಬಿಕೆಯಡಿ ಇಂದು ಉದ್ದು ನೆನೆ ಹಾಕುತ್ತೇವೆ. ಅದೇ ನಂಬಿಕೆ ನಮ್ಮ ರೈತಾಪಿ ಜನರದ್ದು, ಆ ನಂಬಿಕೆಯಡಿಯಲ್ಲಿಯೆ ರೈತಾಪಿ ವರ್ಗ ಬೆವರಿನ ರೂಪದಲ್ಲಿ ರಕ್ತವನ್ನು ಸುರಿಸಿದ ಫಲದಿಂದ ನಮ್ಮ ದೇಶದ ಜನ ಉಂಡು ತಿಂದು ಆರಾಮವಾಗಿ ಇದ್ದಾರೆ ಎನ್ನುವುದನ್ನು ಎಂದು ಮರೆಯಲಾಗದು. ಹೌದು, ಮುಂಗಾರು ಆರಂಭದ ದಿನಗಣನೆಯಲ್ಲಿ ರೈತಾಪಿ ವರ್ಗ ಇರುವುದು ಸಹಜ ಪ್ರಕ್ರಿಯೆ. ಹಾಗೆ ನೋಡಿದರೆ ಮೇ ತಿಂಗಳ ಅಂತ್ಯದಲ್ಲಿ ಮಳೆರಾಯನ ದರ್ಶನವಾದರೂ ಕೃಷಿ ಚಟುವಟಿಕೆಯನ್ನು ಆರಂಭಿಸುವಷ್ಟು ಮಳೆಯಾಗಿಲ್ಲ. ಇನ್ನೇನೂ ಮುಂಗಾರು ಆರಂಭವಾಗುವ ದಿನಗಣನೆಯಲ್ಲಿರುವ ಹಳಿಯಾಳ ತಾಲ್ಲೂಕಿನ ರೈತರು ಈಗಿನಿಂದಲೆ ತಮ್ಮ ತಮ್ಮ ಹೊಲ ಗದ್ದೆಗಳನ್ನು ಹದ ಮಾಡಿ, ಕೃಷಿ ಚಟುವಟಿಕೆಗೆ ಅಣಿಗೊಳಿಸುವ ಕಾರ್ಯಕ್ಕೆ ಶುರುವಚ್ಚಿಕೊಂಡಿದ್ದಾರೆ. ಹಳಿಯಾಳ ತಾಲ್ಲೂಕಿನ ವಿವಿದೆಡೆಗಳಲ್ಲಿ ರೈತರು ಇಂದು ಭಾನುವಾರ ತಮ್ಮ ತಮ್ಮ ಹೊಲ ಗದ್ದೆಗಳನ್ನು ಹದಗೊಳಿಸುವ ಕಾರ್ಯಕ್ಕೆ ಚಾಲನೆಯನ್ನು ನೀಡಿದ್ದಾರೆ.