ಬೆಂಗಳೂರು: ಪಕ್ಷ ಬಲವರ್ಧನೆ ಹಾಗೂ ಬಿಜೆಪಿ ನೀತಿಗಳು, ಆಡಳಿತ ವೈಖರಿ, ಸಂಘರ್ಷದ ವಿರುದ್ಧ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಕಾಂಗ್ರೆಸ್ ಹಮ್ಮಿಕೊಂಡಿರುವ ‘ಭಾರತ್ ಜೋಡೋ’ ಯಾತ್ರೆ ನಾಳೆ ಕರ್ನಾಟಕ ಪ್ರವೇಶಿಸಲಿದೆ. ಈಗಾಗಲೇ ಕೇರಳದ ಹಲವು ಜಿಲ್ಲೆಗಳಲ್ಲಿ ಸಂಚರಿಸಿರುವ ರಾಹುಲ್ ಗಾಂಧಿ ನಾಳೆ ಜಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಮೂಲಕ ರಾಜ್ಯದಲ್ಲಿ ಹೆಜ್ಜೆ ಹಾಕಲಿದ್ದಾರೆ.
ರಾಹುಲ್ ನೇತೃತ್ವದ ಭಾರತ ಜೋಡೋ ಯಾತ್ರೆಗೆ ರಾಜ್ಯ ಕಾಂಗ್ರೆಸ್ ಸಾಕಷ್ಟು ತಯಾರಿಗಳನ್ನು ಮಾಡಿಕೊಂಡಿದೆ. ರಾಹುಲ್ ಸ್ವಾಗತಿಸಲು ಮುಖಂಡರು ಸಜ್ಜಾಗಿದ್ದಾರೆ. ಅಲ್ಲದೇ ರಾಜ್ಯದಲ್ಲಿ ಈ ಯಾತ್ರೆಯನ್ನು ಯಶಸ್ವಿಗೊಳಿಸುವ ಹೊಣೆ ರಾಜ್ಯ ನಾಯಕರ ಮೇಲಿದೆ.
ನಾಳೆ ಬೆಳಗ್ಗೆ 9 ಗಂಟೆಗೆ ರಾಹುಲ್ ಗಾಂಧಿ ಕರ್ನಾಟಕ ಪ್ರವೇಶಿಸಲಿದ್ದಾರೆ. ಈ ಯಾತ್ರೆ ರಾಜ್ಯ ಕಾಂಗ್ರೆಸ್ ನಾಯಕರಿಗೆ ಮಹತ್ವದ್ದಾಗಿದ್ದು ಮಾಜಿ ಸಿಎಂ ಸಿದ್ದರಾಮಯ್ಯ ಗುಂಡ್ಲುಪೇಟೆಗೆ ಭೇಟಿ ನೀಡಿ ಪೂರ್ವಸಿದ್ಧತೆ ಪರಿಶೀಲಿಸಿದ್ದಾರೆ. ನಗರದ ಹಲವು ಕಡೆ ಬ್ಯಾನರ್, ಫ್ಲೆಕ್ಸ್ ಗಳು ರಾರಾಜಿಸುತ್ತಿದೆ. ಭಾರತ್ ಜೋಡೋ ಯಾತ್ರೆ ರಾಜ್ಯದ 8 ಜಿಲ್ಲೆಗಳಲ್ಲಿ 21 ದಿನಗಳ ಕಾಲ, 510 ಕಿಮೀ ಕೈಪಡೆ ಪಾದಯಾತ್ರೆ ನಡೆಸಲಿದೆ.
ಗುಂಡ್ಲುಪೇಟೆಯಲ್ಲಿ ಆರಂಭವಾಗುವ ಯಾತ್ರೆ ಮಧ್ಯಾಹ್ನದ ಊಟಕ್ಕೂ ಮುನ್ನ ಬೆಂಡಗಳ್ಳಿಯಲ್ಲಿ ರಾಹುಲ್ ಗಾಂಧಿ ಕಾರ್ನರ್ ಮೀಟಿಂಗ್ ನಡೆಸಲಿದ್ದಾರೆ. ಇದಾದ ನಂತರ ಬೇಗೂರು ಸಮೀಪ ಮೊದಲ ದಿನ ವಾಸ್ತವ್ಯ ಹೂಡಲಿದ್ದು, ಸಂಜೆ ಹೊತ್ತಿಗೆ ವಕೀಲರು, ವಿದ್ಯಾರ್ಥಿಗಳು, ಚಿಂತಕರು, ಕಲಾವಿದರೊಂದಿಗೆ ರಾಗಾ ಸಂವಾದ ನಡೆಸಲಿದ್ದಾರೆ. ಅಕ್ಟೋಬರ್ 2 ರಂದು ಗಾಂಧಿ ಜಯಂತಿ ಇರುವ ಹಿನ್ನೆಲೆ ನಂಜನಗೂಡು ತಾಲೂಕಿನ ಬದನವಾಳುವಿಗೆ ರಾಹುಲ್ ಗಾಂಧಿ ಭೇಟಿ ಕೊಡಲಿದ್ದಾರೆ.