ದಿನಕರ ಪ್ರತಿಷ್ಠಾನದಿಂದ ದೇಶ ಭಕ್ತಿಗೀತೆ ಸ್ಪರ್ಧೆ

ಅಂಕೋಲಾ : ಸ್ಪರ್ಧೆಗಳು ವ್ಯಕ್ತಿ ವಿಕಸನಕ್ಕೆ ರಹದಾರಿಗಳಂತಿದ್ದು, ವಿದ್ಯಾರ್ಥಿಗಳು ತಮ್ಮ ಆಸಕ್ತಿಯ ಸ್ಪರ್ಧೆಗಳಲ್ಲಿ ಹೆಚ್ಚು ಹೆಚ್ಚು ಭಾಗವಹಿಸುವ ಮೂಲಕ ತಮ್ಮ ವ್ಯಕ್ತಿತ್ವ ವಿಕಸನ ಮಾಡಿಕೊಳ್ಳಬೇಕು. ಇಂತಹ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಪ್ರತಿಯೊಬ್ಬರಲ್ಲಿ ಸ್ಪರ್ಧಾ ಮನೋಭಾವ ತಾನೇ ತಾನಾಗಿ ಉಂಟಾಗಿ ಬದುಕಿನಲ್ಲಿ ಯಶಸ್ವಿಯಾಗಲು ಕಾರಣವಾಗುತ್ತದೆ ಎಂದು ಅಂಕೋಲೆಯ ಹಿರಿಯ ಸಾಹಿತಿ ದಿನಕರ ಪ್ರತಿಷ್ಠಾನದ ಅಧ್ಯಕ್ಷ ಮೋಹನ ಹಬ್ಬು ಅಭಿಪ್ರಾಯಪಟ್ಟರು.
ಅವರು ದಿನಕರ ಪ್ರತಿಷ್ಠಾನ, ಶ್ರೀ ಕೆ.ಮೋಹನದೇವ ಆಳ್ವಾ ಹಾಗೂ ಶೈಲಜಾ ದತ್ತಿ ನಿಧಿ ಪ್ರಾಯೋಜಕತ್ವದಲ್ಲಿ ಅಂಕೋಲೆಯ ಪುರಸಭೆ ವ್ಯಾಪ್ತಿಯ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗೆ ಏರ್ಪಡಿಸಿದ ದೇಶಭಕ್ತಿ ಗೀತೆಯ ಸ್ಪರ್ಧಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಅಂಕೋಲೆಯ ಪಿ.ಎಂ.ಹೈಸ್ಕೂಲಿನ ರೈತ ಭವನದಲ್ಲಿ ಜರುಗಿದ ಸ್ಪರ್ಧಾ ಕಾರ್ಯಕ್ರಮದಲ್ಲಿ ಪ್ರತಿಷ್ಠಾನದ ಕಾರ್ಯದರ್ಶಿ ಜಗದೀಶ ನಾಯಕ, ಹೊಸ್ಕೇರಿ ಎಲ್ಲರನ್ನು ಸ್ವಾಗತಿಸಿದರು. ಅವರು ಪ್ರತಿಷ್ಠಾನದ ಕುರಿತು ಮಾತನಾಡುತ್ತ 1983 ರಲ್ಲಿ ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರಿಂದ ಉದ್ಘಾಟಿಸಲ್ಪಟ್ಟಿದೆ. ಪ್ರತಿಷ್ಠಾನ ದಿನಕರ ಸ್ಮರಣೆಯಲ್ಲಿ ಉಪನ್ಯಾಸ ಕಾರ್ಯಕ್ರಮ, ವಿದ್ಯಾರ್ಥಿಗಳಿಗೆ ಸ್ಪರ್ಧೆ, ಸಾಹಿತ್ಯಗೋಷ್ಠಿ, ಗ್ರಂಥ ಪ್ರಕಟಣೆ, ಕಾವ್ಯ ಕಮ್ಮಟ, ನಾಟಕ ಪ್ರದರ್ಶನಗಳಂತಹ ಉಪಯುಕ್ತ ಕಾರ್ಯಕ್ರಮ ಹಮ್ಮಿಕೊಳ್ಳುತ್ತಲಿದೆ ಎಂದರು. ಸ್ಪರ್ಧೆಯ ನಿರ್ಣಾಯಕರಾಗಿ ನಿವೃತ್ತ ಶಿಕ್ಷಕ ನಾಗೇಂದ್ರ ತೊರ್ಕೆ, ಲೇಖಕ ಜಿ. ಪ್ರೇಮಾನಂದ ಕಾರ್ಯನಿರ್ವಹಿಸಿದರು. ಬರಹಗಾರ, ಸಂಚಾಲಕ ಮಹಾಂತೇಶ ರೇವಡಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ಗಣಪತಿ ತಾಂಡೇಲ ವಂದಿಸಿದರು.
ಸ್ಪರ್ಧಾ ವಿಜೇತರು :
ಪ್ರೌಢಶಾಲಾ ವಿಭಾಗ : ಭಾರ್ಗವ ಆಗೇರ (ಪ್ರಥಮ) ಸರಕಾರಿ ಪ್ರೌಢಶಾಲೆ ಅಂಕೋಲಾ, ಸಾರ್ಥಕ ಶೇನ್ವಿ (ದ್ವಿತೀಯ) ಜೈಹಿಂದ್ ಆಂಗ್ಲ ಮಾಧ್ಯಮ ಶಾಲೆ, ಸ್ವಾತಿ ನಾಯಕ (ತೃತೀಯ) ಜೈಹಿಂದ್ ಕನ್ನಡ ಮಾಧ್ಯಮ ಶಾಲೆ, ಚೈತ್ರಾ ನಾಯಕ (ಸಮಾಧಾನಕರ ಬಹುಮಾನ) ಪಿ.ಎಂ.ಹೈಸ್ಕೂಲ್ ಅಂಕೋಲಾ.
ಹಿರಿಯ ಪ್ರಾಥಮಿಕ ಶಾಲಾ ವಿಭಾಗ : ಆರ್ಯ ಶೆಟ್ಟಿ (ಪ್ರಥಮ) ಜೈಹಿಂದ್ ಹಿರಿಯ ಪ್ರಾಥಮಿಕ ಶಾಲೆ, ಕುಮಾರಿ ಆನಂ ಶೇಖ್ (ದ್ವಿತೀಯ) ಪಿ.ಎಂ.ಹಿರಿಯ ಪ್ರಾಥಮಿಕ ಶಾಲೆ, ದೀಪಿಕಾ ಆಗೇರ (ತೃತೀಯ) ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪುರಲಕ್ಕಿಬೇಣ.