ಅಂಕೋಲಾ: ಸುಜ್ಞಾನ ನಿಧಿ ಕಾರ್ಯಕ್ರಮ; ವಿದ್ಯಾರ್ಥಿ ವೇತನ ವಿತರಣೆ

ಅಂಕೋಲಾ: ತಾಲೂಕಿನ ಗದ್ದುಗೆ ಸಭಾಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸುಜ್ಞಾನ ನಿಧಿ ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮವನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮಂಗಳಲಕ್ಷ್ಮೀ ಪಾಟೀಲರವರು ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಸರಕಾರದಿಂದ ಬರುವಂತ ಸೌಲಭ್ಯಕ್ಕೆ ಪೂರಕವಾಗಿ ಗ್ರಾಮಾಭಿವೃದ್ದಿ ಯೋಜನೆಯ ಮೂಲಕ ಸೌಲಭ್ಯವನ್ನು ನೀಡುತ್ತಿದ್ದಾರೆ. ಇದು ಅವಶ್ಯಕ ಮತ್ತು ಸಂತಸದ ಸಂಗತಿ. ವಿದ್ಯಾರ್ಥಿ ವೇತನ ಪಡೆದವರು ಶಿಕ್ಷಣ ಪಡೆದು ಉನ್ನತ ಹಂತಕ್ಕೆ ತಲುಪಬೇಕು. ನಿಮ್ಮಲ್ಲಿರುವ ಸುಜ್ಞಾನವನ್ನು ನಾಡಿಗೆ ಹಂಚಬೇಕು ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಎಲ್ಲಾ ಕಾರ್ಯಕ್ರಮಗಳು ವಿಶಿಷ್ಟವಾಗಿದೆ. ವಿಪತ್ತು ನಿರ್ವಹಣಾ ಘಟಕ ಪಟ್ಟಣದ ಶಿಕ್ಷಣ ಸಂಸ್ಥೆಗಳ ಸಮುಚ್ಚಯದ ಆವರಣದ ಸ್ವಚ್ಛತೆಗೆ ವಿಶೇಷವಾಗಿ ಶ್ರಮಿಸಿತ್ತು. ಅದರಿಂದ ಇಲಾಖೆಗೆ ಸಹಾಯವಾಗಿದೆ ಎಂದು ಇದೆ ವೇಳೆ ಅವರು ನೆನಪಿಸಿ ಕೃತಜ್ಞತೆ ಅರ್ಪಿಸಿದರು

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕರಾದ ಬಾಬು ನಾಯ್ಕ ಸುಜ್ಞಾನನಿಧಿಯನ್ನು ಪೂಜ್ಯರು ವೃತ್ತಿಪರ ಶಿಕ್ಷಣಕ್ಕೆ ನೀಡುವಂತಹದ್ದು ಎಂದರು. ಯೋಜನೆಯ ಕಾರ್ಯಕ್ರಮಗಳ ಬಗ್ಗೆ ವಿವರವಾಗಿ ತಿಳಿಸಿ, ದೇಶದ ಉತ್ತಮ ಪ್ರಜೆಯಾಗಿ ಬೆಳೆಯಿರಿ ಎಂದು ತಿಳಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿದ ಪುರಸಭೆಯ ನಿಕಟಪೂರ್ವ ಅಧ್ಯಕ್ಷರಾದ ಶಾಂತಲಾ ನಾಡಕರ್ಣಿಯವರು ಮಂಜೂರಾತಿ ಪತ್ರ ವಿತರಣೆ ಮಾಡಿ ಶುಭ ಹಾರೈಸಿದರು. ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷರಾದ ಮಹೇಶ ನಾಯ್ಕರವರು ಕಾರ್ಯಕ್ರಮದ ಕುರಿತು ಮಾತನಾಡಿದರು. ವಲಯದ ಅಧ್ಯಕ್ಷ ಗೋಪಾಲ ಆಚಾರಿ, ವಿಪತ್ತು ಘಟಕದ ಪ್ರತಿನಿಧಿ ಕೇಶವ ನಾಯ್ಕ ಉಪಸ್ಥಿತರಿದ್ದರು.
ಅಂಕೋಲಾ ತಾಲೂಕಿನ ಯೋಜನಾಧಿಕಾರಿಗಳಾದ ಶಶಿರೇಖಾರವರು ಪ್ರಾಸ್ತಾವಿಕವಾಗಿ ಮಾತನಾಡಿ, ತಾಲ್ಲೂಕಿನಲ್ಲಿ 210 ಘಟಕಗಳಿದ್ದು 19000 ಸದಸ್ಯರಿದ್ದಾರೆ. 7 ಶೌರ್ಯ ಘಟಕವಿದೆ. ಅಂಕೋಲಾ ಮಿಶ್ರ ಬೇಸಾಯ ಪದ್ದತಿ ಹೊಂದಿರುವ ಸಮೃದ್ಧ ಕೃಷಿ ಬೆಳೆಯುವ ಪ್ರದೇಶ.
ಡಿಸೆಂಬರ್ ತಿಂಗಳಲ್ಲಿ ಅಂಕೋಲಾದಲ್ಲಿ ಮದ್ಯ ವರ್ಜನ ಶಿಬಿರ ಏರ್ಪಡಿಸಲಾಗುವುದು. ಶೀಘ್ರದಲ್ಲಿಯೇ ಅಂಕೋಲಾದಲ್ಲಿ ಯೋಜನಾಧಿಕಾರಿ ಕಚೇರಿ ಆರಂಭವಾಗಲಿದೆ ಎಂದರು.
66 ವಿದ್ಯಾರ್ಥಿಗಳಿಗೆ ಮಂಜೂರಾತಿ ಪತ್ರವನ್ನು ವಿತರಣೆ ಮಾಡಲಾಯಿತು. ಅಂಕೋಲಾ ವಲಯದ ಮೇಲ್ವಿಚಾರಕರಾದ ಅಶೋಕರವರು ಕಾರ್ಯಕ್ರಮದ ನಿರೂಪಣೆ ಮಾಡಿದರು. ವಂದಿಗೆ ವಲಯದ ಮೇಲ್ವಿಚಾರಕಿ ಶೋಭಾ ಪೂಜಾರಿ ಎಲ್ಲರನ್ನು ವಂದಿಸಿದರು.