ಅಂಕೋಲಾ: ತಾಲೂಕಿನ ಜೈಹಿಂದ್ ಮೈದಾನದಲ್ಲಿ ಗಾಂಜಾ ಸೇವಿಸಿದ ಆರೋಪದ ಮೇಲೆ ಯುವಕನೋರ್ವನನ್ನು ಪೊಲೀಸರು ವಶಕ್ಕೆ ಪಡೆದು, ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಕಾನೂನು ಕ್ರಮ ಜರುಗಿಸಿದ್ದಾರೆ.
ಕಾರವಾರದ ಬೈತಕೋಲದ ಗಿರೀಶ ಚಂದ್ರ ಭಂಡಾರಿ (19) ಗಾಂಜಾ ಸೇವಿಸಿದ ಆರೋಪಿಯಾಗಿದ್ದಾನೆ.
ವಸತಿಗೃಹ ಒಂದರಲ್ಲಿ ಕೆಲಸ ಮಾಡುತ್ತಿರುವ ಗಿರೀಶ ಪಟ್ಟಣದ ಮುಖ್ಯ ಬಸ್ ನಿಲ್ದಾಣದ ಆಯಕಟ್ಟಿನ ಜಾಗವಾದ ಮೈದಾನದಲ್ಲಿ ಗಾಂಜಾ ಸೇವಿಸಿದ್ದ ವೇಳೆ, ಅನುಮಾನದಿಂದ ಪೊಲೀಸರು ವಿಚಾರಣೆಗೆ ಒಳಪಡಿಸಿದಾಗ ಗಾಂಜಾ ಘಮಲು ಏರಿದ್ದು ತಿಳಿದು ಬಂದಿದೆ. ನಂತರ ಕಾರವಾರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಮಾದಕ ದ್ರವ್ಯ ಸೇವನೆಯ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಗಾಂಜಾ ಸೇವನೆ ಮಾಡಿರುವುದು ಖಚಿತವಾಗಿದೆ. ತಾಲೂಕಿನ ಕ್ರೀಡಾ ಚಟುವಟಿಕೆಗಳಿಗೆ ಮೀಸಲಾಗಿದ್ದ ಜೈ ಹಿಂದ್ ಮೈದಾನ ಇದೀಗ ಇಂತಹ ಅನೈತಿಕ ಕಾರ್ಯಗಳಿಂದ ಗುರುತಿಸಿಕೊಳ್ಳುವಂತಾಗಿದೆ. ಈ ಮೈದಾನದಲ್ಲಿ ತರಬೇತಿ ನಡೆಸಿದ ಹಲವು ಕ್ರೀಡಾಪಟುಗಳು ರಾಷ್ಟ್ರಮಟ್ಟದ ಕ್ರೀಡಾಪಟುಗಳಾಗಿ ಹೊರಹೊಮ್ಮಿದ್ದಾರೆ. ಈ ಮೈದಾನ ಕ್ರೀಡೆ ಸಾಂಸ್ಕೃತಿಕ ಸಾಹಿತ್ಯಿಕ ಮತ್ತು ಉತ್ಸವಗಳಿಗೆ ಸೀಮಿತವಾಗಿತ್ತು. ಪಕ್ಕದಲ್ಲಿಯೇ ಇರುವ ಬಸ್ ನಿಲ್ದಾಣದ ಶೌಚಾಲಯ ಮುಚ್ಚಿರುವ ಕಾರಣ ದೂರದ ಪ್ರಯಾಣಿಕರು ಮತ್ತು ಕೆಲವರು ಮೈದಾನದಲ್ಲಿ ಮಲಮೂತ್ರ ವಿಸರ್ಜನೆ ಮಾಡುತ್ತಿರುವುದು ಈಗ ಸಾಮಾನ್ಯವಾಗಿ ಕಂಡುಬರುತ್ತದೆ. ಮೈದಾನದ ಆಸನ ಕಟ್ಟೆಯ ಆಸು ಪಾಸಿನಲ್ಲಿಯೂ ಮಧ್ಯದ ಬಾಟಲಿಗಳು ಕಂಡುಬರುತ್ತವೆ. ಕಾಲೇಜು ವಿದ್ಯಾರ್ಥಿಗಳ ದಂಡು ತರಗತಿಗೆ ಚಕ್ಕರ್ ಹಾಕಿಕೊಂಡು ಇಲ್ಲಿಯೇ ಕಾಲಹರಣ ಮಾಡುತ್ತಿದೆ. ಒಂದು ವೇಳೆ ಈ ಗಾಂಜಾ ಗಮಲು ವಿದ್ಯಾರ್ಥಿಗಳಿಗೆ ಅಂಟಿಕೊಂಡರೆ ಸಾಂಕ್ರಾಮಿಕ ರೋಗದಂತೆ ಹಬ್ಬುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.
ಬಸ್ ನಿಲ್ದಾಣದ ಮತ್ತು ಜನಸಂದಣಿಯ ಸಮೀಪದ ಪ್ರದೇಶವಾಗಿರುವ ಜೈ ಹಿಂದ್ ಮೈದಾನದಲ್ಲಿ ಗಾಂಜಾ ಸೇವಿಸಿದ್ದ ಯುವಕನನ್ನು ವಶಕ್ಕೆ ಪಡೆಯುವ ಮೂಲಕ ಪೊಲೀಸರು ಮೆಚ್ಚುಗೆಯ ಕಾರ್ಯ ನಿರ್ವಹಿಸಿದ್ದಾರೆ. ಕಳೆದ ಮೂರು ವರ್ಷಗಳಿಂದ ಗಾಂಜಾ ಸೇವನೆ ಮತ್ತು ಮಾರಾಟದ ಸಣ್ಣಪುಟ್ಟ ಆರೋಪಿಗಳು ಮಾತ್ರವೇ ಸಿಕ್ಕಿಹಾಕಿಕೊಳ್ಳುತ್ತಿದ್ದು ಮೂಲ ಕೆದುಕಿ ನಿರ್ಮೂಲನೆ ಮಾಡಬೇಕಾದ ಅವಶ್ಯಕತೆ ಇದೆ.