ಜಾಗತಿಕ ಮಟ್ಟದ “ಪ್ಲಾಂಟ್ ಜಿನೋಮ್ ಸೇವಿಯರ್ ಫಾರ್ಮರ್” ಪ್ರಶಸ್ತಿ ಪಡೆದ ಕೃಷಿಕ ರಮಾಕಾಂತ ರಾಮಚಂದ್ರ ಹೆಗಡೆ ಅವರಿಗೆ ಅಭಿನಂದನಾ ಕಾರ್ಯಕ್ರಮ

ಸಿದ್ದಾಪುರ; ಪಟ್ಟಣದ ಸಹಾಯಕ ತೋಟಗಾರಿಕೆ ನಿರ್ದೆಶಕರ ಕಾರ್ಯಾಲಯದ ಡಾ.ಎಂ.ಎಚ್. ಮರಿಗೌಡರ್ ಸಭಾಂಗಣದಲ್ಲಿ ಜಾಗತಿಕ ಮಟ್ಟದ “ಪ್ಲಾಂಟ್ ಜಿನೋಮ್ ಸೇವಿಯರ್ ಫಾರ್ಮರ್” ಪ್ರಶಸ್ತಿಯನ್ನು ರಾಷ್ಟ್ರಪತಿಗಳಿಂದ ಸೆ.12 ರಂದು ಪಡೆದ ತಾಲ್ಲೂಕಿನ ಹುಣಸೆಕೊಪ್ಪ ಗ್ರಾಮದ ಕಲ್ಕಟ್ಟೆಯ ಕೃಷಿಕ ರಮಾಕಾಂತ ರಾಮಚಂದ್ರ ಹೆಗಡೆ ಅವರಿಗೆ ಇಲಾಖೆ ವತಿಯಿಂದ ಅಭಿನಂದನಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಅವರು ಗುರುವಾರ ಮಾತನಾಡಿದರು. ಸನ್ಮಾನ ಸ್ವೀಕರಿಸಿದ ರಮಾಕಾಂತ ಹೆಗಡೆ ಮಾತನಾಡಿ ನಿಧಾನ ಸೊರಗು ರೋಗ ತಡೆದುಕೊಳ್ಳುವ ಶಕ್ತಿಯುಳ್ಳ “ಸಿಗಂದಿನಿ” ಹೆಸರಿನ ಕಾಳುಮೆಣಸಿದ ತಳಿಯ ಗಿಡಗಳನ್ನು ಕಳೆದ ಎಂಟು ವರ್ಷಗಳಿಂದ ನರ್ಸರಿ ಮೂಲಕ ಬೆಳೆದು ಕರ್ನಾಟಕ ರಾಜ್ಯದ ವಿವಿಧ ಭಾಗಗಳಿಗೆ ಬೇಡಿಕೆಗನುಗುಣವಾಗಿ ಪೂರೈಸುತ್ತಿದ್ದೇನೆ. ಈ ವರ್ಷವೆ 1 ಲಕ್ಷ 40 ಸಾವಿರ ಗಿಡಗಳನ್ನು ತಯಾರಿಸಿ ಪೂರೈಸಿದ್ದೇವೆ. ಆಯ್.ಆಯ್.ಎಸ್.ಆರ್.ನ ನಿವೃತ್ತ ಹಿರಿಯ ವಿಜ್ಞಾನಿ ಡಾ.ಎಂ.ಎನ್.ವೇಣುಗೋಪಾಲ ಅವರು ಈ ಕುರಿತು ನನಗೆ ಸಂಪೂರ್ಣ ಮಾರ್ಗದರ್ಶನ ನೀಡಿದ್ದರಿಂದ ಈ ಸಾಧನೆ ಸಾಧ್ಯವಾಗಿದೆ. ರಾಷ್ಟ್ರಪತಿಗಳಿಂದ 1.50 ಲಕ್ಷ ರೂ.ಗೌರವ ಧನದೊಂದಿಗೆ ಜಾಗತಿಕ ಮಟ್ಟದ ಪ್ರಶಸ್ತಿ ದೊರಕಿದ್ದು ಸಂತಸ ನೀಡಿದೆ . ಈ ಕ್ಷೇತ್ರದಲ್ಲಿ ಮತ್ತಷ್ಟು ಸಾಧನೆ ಮಾಡುವ ಹುಮ್ಮಸ್ಸು ಮೂಡಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಹಾರ್ಸಿಕಟ್ಟಾದ ಅಘನಾಶಿನಿ ಸ್ಪೈಸಸ್ ಪ್ರೊಡ್ರ್ಯೂಸರ್ ಕಂಪನಿಯ ಅಧ್ಯಕ್ಷ ಎಸ್.ಆರ್.ಹೆಗಡೆ ಕುಂಬಾರಕುಳಿ ಮಾತನಾಡಿ ರಮಾಕಾಂತ ಹೆಗಡೆಯವರು ಉತ್ಪಾದಿಸುತ್ತಿರುವ ಸಿಗಂದಿನಿ ಕಾಳುಮೆಣಸಿನ ತಳಿಯು ಅತ್ಯಧಿಕ ಪ್ರಮಾಣದಲ್ಲಿ ಔಷಧೀಯ ಗುಣ ಹೊಂದಿದೆ. ಇದೀಗ ಅವರಿಗೆ ಜಾಗತಿಕ ಮಟ್ಟದ ಪ್ರಶಸ್ತಿ ದೊರೆತಿದ್ದರಿಂದ ಉಳಿದ ರೈತರಿಗೂ ಈ ಕ್ಷೇತ್ರದಲ್ಲಿ ಸಾಧನೆ ಮಾಡಲು ಪ್ರೇರಣೆ ದೊರೆತಂತಾಗಿದೆ ಎಂದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಅರುಣ ಎಚ್.ಜಿ. ರಮಾಕಾಂತ ಹೆಗಡೆಯವರನ್ನು ಅಭಿನಂದಿಸಿ ಮಾತನಾಡಿದರು. ತೋಟಗಾರಿಕಾ ಸಹಾಯಕ ನಿರ್ದೇಶಕ ಮಹಾಬಲೇಶ್ವರ ಹೆಗಡೆ ಸ್ವಾಗತಿಸಿ ವಂದಿಸಿದರು.