ಸಿದ್ದಾಪುರ : ಜಾನಪದ- ಕೃಷಿ ಗ್ರಾಮೀಣ ಬದುಕಿನ ಜೋಡೆತ್ತುಗಳು.

ಸಿದ್ದಾಪುರ : ಜನಪದವೆಂಬುದು ಮನುಷ್ಯನ ಉದಯದಿಂದಲೇ ಆರಂಭವಾಗಿದ್ದು ಕೃಷಿ ಮತ್ತು ಜನಪದ ಗ್ರಾಮೀಣ ಬದುಕಿನ ಜೋಡೆತ್ತುಗಳಂತೆ ನಿರಂತರವಾಗಿ ಜೊತೆ ಜೊತೆಯಲಿ ನಡೆದು ಬಂದಿದ್ದು ಇಂದಿನ ಮಕ್ಕಳು ಜನಪದ ಸಂಸ್ಕೃತಿಯನ್ನು ಮರೆಯದೆ ಉಳಿಸಿಕೊಳ್ಳಬೇಕೆಂದು ಮುಖ್ಯಾಧ್ಯಾಪಕ ರತ್ನಾಕರ ಪಾಲೇಕರ್ ಹೇಳಿದರು .
ತಾಲೂಕಿನ ಬಿಳಗಿ ಸೀತಾ ರಾಮಚಂದ್ರ ಪ್ರೌಢಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಏರ್ಪಡಿಸಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜನಪದ ಸಾಹಿತ್ಯದ ಅಳಿವು-ಉಳಿವಿನ ಕುರಿತು ಉಪನ್ಯಾಸ ನೀಡಿದ ಸಾಹಿತ್ಯ ಚಿಂತಕಿ, ಶಿಕ್ಷಕಿ ಕು. ವಿನೋದಾ ಭಟ್ಟ
ನಾಡಿನ ಹೆಸರಾಂತ ಜಾನಪದ ಸಾಹಿತಿ ದಿ ಡಾ.ಎಲ್ ಆರ್. ಹೆಗಡೆಯವರು ಗ್ರಾಮೀಣ ಭಾಗದ ಎಲ್ಲಾ ಜನಾಂಗದ ಮನೆಯಂಗಳ ಪ್ರವೇಶಿಸಿ ಜನಪದ ಸಾಹಿತ್ಯವನ್ನು, ಜೊತೆಗೆ ಹಲವಾರು ಔಷಧೀಯ ಸಸ್ಯಗಳನ್ನು ಕ್ರೋಢೀಕರಿಸಿದ ಜನಪದ ಕಣಜವೆಂದೇ ಹೆಸರಾಗಿದ್ದರು ಎಂದರು.
ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಮಹಾಬಲೇಶ್ವರ ಬಿ.ಎಸ್. ಅವರು ಕೃಷಿಯೊಂದಿಗೆ ಜೇನು ಸಾಕಾಣಿಕೆ ಕುರಿತು ಪ್ರೊಜೆಕ್ಟರ್ ಮೂಲಕ ಉಪನ್ಯಾಸ ನೀಡಿ ಬಹೂಪಯೋಗಿ ಜೇನಿನ ಪರಾಗಸ್ಪರ್ಶವಿಲ್ಲದೆ ಕೃಷಿಯಿಲ್ಲ. ಆದ್ದರಿಂದ ಕೃಷಿಕರು,ಯುವಕರು, ವಿದ್ಯಾರ್ಥಿಗಳು ಅತ್ಯಂತ ಸರಳವಾಗಿ, ಅತಿಕಡಿಮೆ ಖರ್ಚಿನಲ್ಲಿ ತಮ್ಮ ಮನೆ ಸುತ್ತಮುತ್ತ, ತೋಟ, ಬೇಣಗಳಲ್ಲಿ ಜೇನುಕೃಷಿ ಮಾಡಲು ಉತ್ಸುಕರಾಗಬೇಕೆಂದು ಕರೆ ನೀಡಿದರು..
ಕಸಾಪ ತಾಲೂಕು ಅಧ್ಯಕ್ಷ ಗೋಪಾಲ ನಾಯ್ಕ ಭಾಶಿ ಅಧ್ಯಕ್ಷತೆ ವಹಿಸಿ ಮಾತನಾಡಿ ಸಿದ್ದಾಪುರದ ಶೈಕ್ಷಣಿಕ ಸಂಸ್ಥೆಗಳ ರೂವಾರಿ ದಿ. ಗಣೇಶ ಹೆಗಡೆ ದೊಡ್ಮನೆಯವರು ಅವರ ತಂದೆ ದಿ. ನಾರಾಯಣ ಸುಬ್ಬಯ್ಯ ಹೆಗಡೆ ಇವರ ಹೆಸರಿನಲ್ಲಿ ಹಾಗೂ ನಾಡಿನ ಖ್ಯಾತ ಜಾನಪದ ತಜ್ಞ ಡಾ.ಎಲ್. ಆರ್. ಹೆಗಡೆಯವರು ಅವರ ಆಪ್ತ ಮಿತ್ರರಾಗಿದ್ದ ದಿ. ಕೃಷ್ಣ ಶೆಟ್ಟಿ ಯವರ ಹೆಸರಲ್ಲಿ ಕಸಾಪ ಕೇಂದ್ರ ಕಛೇರಿಯಲ್ಲಿ ದತ್ತಿನಿಧಿ ಇರಿಸಿದ್ದು ಅವರ ದೂರದೃಷ್ಟಿಯ ಚಿಂತನೆ ಶ್ಲಾಘನೀಯ. ಕನ್ನಡ ಸಾಹಿತ್ಯ ಪರಿಷತ್ತು ಈ ಕುರಿತು ನಿಯಮಿತವಾಗಿ ಉಪಯುಕ್ತ ಕಾರ್ಯಕ್ರಮ ನಡೆಸುತ್ತ ದತ್ತಿನಿಧಿ ಸಂಸ್ಥಾಪಕರ ಆಶಯವನ್ನು ಈಡೇರಿಸಲಿದೆ ಎಂದರು.

ಮುಖ್ಯ ಅತಿಥಿಯಾಗಿ ಪ್ರಾಥಮಿಕ ಶಾಲಾ ಮುಖ್ಯಾಧ್ಯಾಪಕಿ ಲೀಲಾವತಿ ಮಡಿವಾಳ ಭಾಗವಹಿಸಿ ಸಾಹಿತ್ಯ ಪರಿಷತ್ತಿನ ಕಾರ್ಯಚಟುವಟಿಕೆಗಳನ್ನು ಪ್ರಶಂಶಿಸಿದರು. ಕಸಾಪ ಕೋಶಾಧ್ಯಕ್ಷ ಪಿ.ಬಿ. ಹೊಸೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕರಾದ ಪಿ.ಟಿ. ವಾಲ್ಮೀಕಿ, ಹುಸೇನ್ ಸಾಬ್, ಗಾಯತ್ರಿ ಗೌಡ, ತೋಟಗಾರಿಕೆ ಇಲಾಖೆಯ ಸ.ನಿರ್ದೇಶಕ ಬಸಪ್ಪ ಬಂಡಿ, ಜೇನು ಅನುಪಾಲಕರಾದ ಬೆನಕ ನಾಯ್ಕ, ಕಿರಣ್ ನಾಯ್ಕ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ಅತ್ಯುತ್ತಮ ಜೇನು ಕೃಷಿಕ ಪ್ರಶಸ್ತಿ ಪುರಸ್ಕೃತ ಬೆನಕ ನಾಯ್ಕ ಹಾಗೂ ತಾಲೂಕು ಉತ್ತಮ ಜೇನು ಕೃಷಿಕ ಕಿರಣ ನಾಯ್ಕ ಇವರನ್ನು ಕ.ಸಾ.ಪ. ವತಿಯಿಂದ ಗೌರವಿಸಲಾಯಿತು.
ಆರಂಭದಲ್ಲಿ ಕು. ಸಂಗಡಿಗರು ಕೀರ್ತನಾ ಜನಪದ ಗೀತೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಸಾಪ ಕಾರ್ಯದರ್ಶಿ ಅಣ್ಣಪ್ಪ ನಾಯ್ಕ ಸ್ವಾಗತಿಸಿದರು. ಶಿಕ್ಷಕ ಶ್ರೀಧರ ಹೆಬ್ಬಾರ ವಂದಿಸಿದರು. ಡಿ.ಬಿ. ದೊಡ್ಮನಿ ಕಾರ್ಯಕ್ರಮ ನಿರೂಪಿಸಿದರು.