ಸಿದ್ದಾಪುರ: ಜಿಲ್ಲೆಯಲ್ಲಿ ವ್ಯಾಪಕ ಮಳೆ ಸುರಿದಿದ್ದರಿಂದ ವಿವಿಧ ಗ್ರಾಮಗಳ ರಸ್ತೆಗಳು ಸಂಪೂರ್ಣ ಹದಗೆಟ್ಟಿವೆ. ಈ ಸಾಲಿಗೆ ಮಂಡ್ಲಿಕೊಪ್ಪ-ಗೊರಟನಮನೆ ರಸ್ತೆಯೂ ಸೇರಿಕೊಂಡಿದೆ.
ಹೌದು.! ಕಾನಗೋಡು ಗ್ರಾಮ ಪಂಚಾಯತ ವ್ಯಾಪ್ತಿಯ, ಶಿರಸಿ-ಸಿದ್ದಾಪುರ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಗೊರಟಮನೆ ರಸ್ತೆ ಕೆಸರುಗದ್ದೆಯಾಗಿ ಮಾರ್ಪಾಡಾಗಿದೆ. ಸಾರ್ವಜನಿಕರು ರಸ್ತೆಯಲ್ಲಿ ಓಡಾಡಲಾಗದೇ ಆಡಳಿತ ವ್ಯವಸ್ಥೆಗೆ ಹಿಡಿಶಾಪ ಹಾಕುತ್ತಿದ್ದಾರೆ.
ಗೊರಟನಮನೆಯಿಂದ ಮುಖ್ಯ ರಸ್ತೆಗೆ ಬರಬೇಕೆಂದರೆ ಮೂರು ಕಿ.ಮೀ ಕಾಡಿನಲ್ಲೇ ನಡೆದು ಬರಬೇಕು. ಮಳೆಗಾಲ ಬಂತೆAದರೆ ಸಾಕು ರಸ್ತೆ ಸಂಪೂರ್ಣ ಕೆಸರಾಗಿ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ಇದರಿಂದ ಶಾಲಾ ಮಕ್ಕಳು, ಮಹಿಳೆಯರು, ವೃದ್ಧರು ಸಂಕಷ್ಟ ಅನುಭವಿಸುವಂತಾಗಿದೆ. ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಯಾರಿಗಾದರೂ ಹುಶಾರಿಲ್ಲಾ ಅಂದ್ರೆ ದೇವರೇ ಗತಿ.!
ಇನ್ನು ಈ ಭಾಗದಲ್ಲಿ ಅಕ್ರಮವಾಗಿ ಮರಳುಗಾಡಿಗಳು ರಾತ್ರಿ ಹಗಲೆನ್ನದೇ ಓಡಾಡುತ್ತಿರುವುದರಿಂದ ರಸ್ತೆ ತುಂಬಾ ಹದಗೆಟ್ಟಿದೆ. ಜೊತೆಗೆ ಮಳೆನೀರು ಹೋಗಲೂ ಸರಿಯಾದ ವ್ಯವಸ್ಥೆ ಇಲ್ಲದಿದ್ದರಿಂದ ರಸ್ತೆಯ ಮೇಲೆ ಹರಿದು ರಸ್ತೆ ಕೆಸರು ಗದ್ದೆಯಂತಾಗಿದೆ. ಹೀಗಾಗಿ ವಾಹನ ಇರಲಿ ನಡೆದುಕೊಂಡು ಹೋಗುವುದೂ ಅಸಾಧ್ಯವಾಗಿದೆ. 3 ಕಿಮೀ ಸಂಚರಿಸಬೇಕೆಂದರೆ ದೊಡ್ಡ ಸಾಹಸವನ್ನೆ ಮಾಡಬೇಕು. ಇನ್ನು ಮರಳು ಸಾಗಾಣಿಕೆ ಮಾಡುತ್ತಿರುವವರ ವಿರುದ್ಧ ಅರಣ್ಯ ಇಲಾಖೆ ಅಧಿಕಾರಿಗಳೂ ಮೌನ ವಹಿಸಿದ್ದಾರೆ ಎನ್ನುವುದು ಗ್ರಾಮಸ್ಥರ ಆರೋಪ
ನಮ್ಮ ಗ್ರಾಮಕ್ಕೆ ಕಾನಗೋಡ ಪಂಚಾಯ್ತಿಯಿಂದ ಯಾವುದೇ ಸೌಲಭ್ಯವೂ ಸಿಕ್ಕಿಲ್ಲ. ತಮಗೆ ಬೇಕಾದವರ ಒಂದೇ ಮನೆಗೆ ತೆರಳಲು ಲಕ್ಷಗಟ್ಟಲೆ ಹಣ ಹಾಕಿ ಎರಡು ಮೂರು ಕಿಮೀ ರಸ್ತೆ ಮಾಡಿದ ಉದಾಹರಣೆಗಳಿವೆ. ಆದರೆ ಜನ ಪ್ರತಿನಿಧಿಗಳಿಗೆ ನಮ್ಮ ರಸ್ತೆ ಕಾಣುತ್ತಿಲ್ಲವೇ? ಎಂಬುದು ಗ್ರಾಮಸ್ಥರ ಪ್ರಶ್ನೆ.
ಈ ಹಿಂದೆ ರಸ್ತೆ ಮಾಡುವಂತೆ ಹಲವಾರು ಬಾರಿ ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ರೂ ಯಾರೂ ಸ್ಪಂದಿಸಿಲ್ಲ. ಕಳೆದ ವರ್ಷ 20,000 ಖರ್ಚು ಮಾಡಿ ರಸ್ತೆ ರಿಪೇರಿ ಮಾಡಿಕೊಂಡಿದ್ದೇವೆ. ಇನ್ನಾದರೂ ಗೊರಟನಮನೆಗೆ ಪಕ್ಕಾ ರಸ್ತೆ ನಿರ್ಮಿಸಿ ಕೊಡಿ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.