ಕಳಪೆ ರಸ್ತೆ ಕಾಮಗಾರಿಯಿಂದ ಜನರಿಗೆ ಸಂಕಷ್ಟ.! ಗದ್ದೆಗಳಿಗೆ ಉಪ್ಪು ನೀರು ನುಗ್ಗಿ ಬೆಳೆ ಹಾನಿ.!

ಹೊನ್ನಾವರ: ಹಳದಿಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಿರಬೈಲ್ ಗೊಳಿಬೆಟ್ಟ ಮಜರೆಯಲ್ಲಿ ರಸ್ತೆ ಕಳಪೆ ಕಾಮಗಾರಿಯಿಂದ ಜನರಿಗೆ ಸಂಕಷ್ಟ ಎದುರಾಗಿದೆ. ಗದ್ದೆಗಳಿಗೆ ಉಪ್ಪು ನೀರು ನುಗ್ಗಿ ಬೆಳೆ ಹಾನಿಯಾಗುತ್ತಿದ್ದು ಕಳಪೆ ಕಾಮಗಾರಿಗೆ ಕಾರಣರಾದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ. ಈ ಬಗ್ಗೆ ಗ್ರಾಮ ಪಂಚಾಯತ್ ಅಧ್ಯಕ್ಷ ಅಜಿತ್ ನಾಯ್ಕ ಇವರಿಗೆ ಸ್ಥಳೀಯರು ಮನವಿ ನೀಡಿದರು.

ಬಡಗಣಿ ನದಿ ಬಲದಂಡೆಗೆ ಕಾರ್ಲೆಂಡ್ ಗಾಗಿ ಚಿಕ್ಕ ನೀರಾವರಿ ಯೋಜನೆಯಡಿ 50 ಲಕ್ಷ ರೂಪಾಯಿ ಮಂಜೂರಿಯಾಗಿ ಕಳೆದ ಮೇ ತಿಂಗಳಲ್ಲಿ ಕಾಮಗಾರಿ ನಡೆದಿತ್ತು. ಈ ಕಾಮಗಾರಿ ಸಂಪೂರ್ಣವಾಗಿ ಕಳಪೆಯಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ. ಕಾಮಗಾರಿ ಪೂರ್ಣಗೊಂಡು ಎರಡು ತಿಂಗಳು ಕಳೆಯುವುದರೊಳಗೆ ರಸ್ತೆ ಹಾಗೂ ಪೀಚಿಂಗ್ ಸಂಪೂರ್ಣವಾಗಿ ಕುಸಿದು ನದಿಯ ಪಾಲಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

100 ಕ್ಕೂ ಅಧಿಕ ಕುಟುಂಬಗಳು ಈ ಪ್ರದೇಶದಲ್ಲಿ ವಾಸಿಸುತ್ತಿದ್ದು ವಯೋವೃದ್ಧರು ಹಾಗೂ ಶಾಲಾ ಮಕ್ಕಳು ಈ ದಾರಿಯಿಂದ ನಡೆಯಲು ಭಯಪಡುತ್ತಿದ್ದಾರೆ. ಕಾಮಗಾರಿ ನಡೆಯುವ ವೇಳೆ ಸ್ಥಳೀಯ ಪಂಚಾಯತ್ ಗಮನಕ್ಕೂ ತರದೇ ತಮಗೆ ಇಷ್ಟ ಬಂದ ರೀತಿಯಲ್ಲಿ ಕಾಮಗಾರಿ ಮುಗಿಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.