ಬೆಂಗಳೂರಿನ ಐದು ಪ್ರಮುಖ ಆಸ್ಪತ್ರೆಗಳಲ್ಲಿ ಇಂದಿರಾ ಕ್ಯಾಂಟೀನ್ ಆರಂಭಕ್ಕೆ ಸಿಎಂ ಸೂಚನೆ

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ಇಂದಿರಾ ಕ್ಯಾಂಟೀನ್​ಗಳು ಮರುಜೀವ ಪಡೆದುಕೊಳ್ಳುತ್ತಿವೆ. ಇತ್ತೀಚೆಗಷ್ಟೇ ಹೊಸದಾಗಿ ಇಂದಿರಾ ಕ್ಯಾಂಟೀನ್ ಆರಂಭ ಮಾಡುವ ಮಾಹಿತಿಯನ್ನು ಸಿಎಂ ಸಿದ್ದರಾಮಯ್ಯ ನೀಡಿದ್ದರು.

ಮುಂದೆ ಬಿಬಿಎಂಪಿ ಚುನಾವಣೆ ಹಿನ್ನೆಲೆ ರಾಜಧಾನಿಯಲ್ಲಿ ಜನಪ್ರಿಯ ಯೋಜನೆಯಾದ ಇಂದಿರಾ ಕ್ಯಾಂಟೀನ್ ಆರಂಭಿಸಲು ಸರ್ಕಾರ ಮುಂದಾಗಿದೆ.

243 ವಾರ್ಡ್ ಗಳಿಗೆ ಒಂದೊಂದು ಇಂದಿರಾ ಕ್ಯಾಂಟೀನ್ ಆರಂಭಿಸಲು ಸಿದ್ದರಾಮಯ್ಯ ಸರ್ಕಾರ ಸಿದ್ಧತೆ ನಡೆಸುತ್ತಿದೆ. ಇದರ ಜೊತೆಗೆ ನಗರದ ಪ್ರಮುಖ ಆಸ್ಪತ್ರೆ ಹಾಗೂ ಬಸ್ ನಿಲ್ದಾಣಗಳಲ್ಲಿ ಇಂದಿರಾ ಕ್ಯಾಂಟೀನ್ ಆರಂಭಿಸಲು ಚಿಂತನೆ ನಡೆಸಿದೆ.

ವಾರ್ಡ್​​ಗಳ ಹೊರತಾಗಿ ನಗರದ ಏಳು ಜಾಗದಲ್ಲಿ ಇಂದಿರಾ ಕ್ಯಾಂಟೀನ್ ಆರಂಭಿಸಿ ಎಂದು ಸಿಎಂ ಸಿದ್ದರಾಮಯ್ಯ ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಈ ಏಳು ಪ್ರದೇಶದಲ್ಲಿ ಇಂದಿರಾ ಕ್ಯಾಂಟೀನ್ ಆರಂಭಿಸಿದ್ರೆ ಬಡವರಿಗೆ ಸಹಾಯ ಆಗಲಿದೆ ಎಂಬುವುದು ಸಿದ್ದರಾಮಯ್ಯ ಅವರ ಲೆಕ್ಕಾಚಾರವಾಗಿದೆ.

ಆಸ್ಪತ್ರೆ ಹಾಗೂ ಬಸ್ ನಿಲ್ದಾಣಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಜನರು ಬರುತ್ತಾರೆ. ರಾಜಧಾನಿಗೆ ಆಗಮಿಸುವ ಜನರಿಗೆ ಕಡಿಮೆ ದರದಲ್ಲಿ ಆಹಾರ ನೀಡಲು ಸರ್ಕಾರ ಮುಂದಾಗಿದೆ.

ಶೀಘ್ರದಲ್ಲಿಯೇ ಬೆಂಗಳೂರಿನ ಐದು ಸರ್ಕಾರಿ ಆಸ್ಪತ್ರೆ ಎರಡು ಬಸ್ ನಿಲ್ದಾಣದ ಒಳಭಾಗದಲ್ಲೇ ಇಂದಿರಾ ಕ್ಯಾಂಟೀನ್ ಆರಂಭಗೊಳ್ಳಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

ವಿಕ್ಟೋರಿಯಾ ಆಸ್ಪತ್ರೆ, ಕೆಸಿ ಜನರಲ್ ಆಸ್ಪತ್ರೆ, ಜಯನಗರ ಜನರಲ್ ಆಸ್ಪತ್ರೆ, ಬೌರಿಂಗ್ ಆಸ್ಪತ್ರೆ, ಯಲಹಂಕ ಜನರಲ್ ಆಸ್ಪತ್ರೆ, ಮೆಜೆಸ್ಟಿಕ್ ಬಸ್ ನಿಲ್ದಾಣ ಮತ್ತು ಕೆಆರ್ ಮಾರ್ಕೆಟ್ ಬಸ್ ನಿಲ್ದಾಣ.