ಭಟ್ಕಳದಲ್ಲಿ ಜ್ವರದಿಂದ ಬಳಲುತ್ತಿದ್ದ ಬಾಲಕಿ ಸಾವು

ಭಟ್ಕಳ: ಜ್ವರದಿಂದ ಬಳಲುತ್ತಿದ್ದ ತಾಲೂಕಿನ  ಬಾಲಕಿಯೋರ್ವಳು ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವ ಘಟನೆ ಗುರುವಾರದಂದು ತಡರಾತ್ರಿ ಸರಕಾರಿ ಆಸ್ಪತ್ರೆಯಲ್ಲಿ ವರದಿಯಾಗಿದೆ. ಮೃತ ಬಾಲಕಿ ಫಾತಿಮಾ ಮುನಾ ಎನ್ನುವವಳು 5ನೇ ತರಗತಿ ಆನಂದ ಆಶ್ರಮ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು ಎಂದು ತಿಳಿದು ಬಂದಿದೆ. ಇಲ್ಲಿನ ಸಿದ್ದೀಕ್ ಸ್ಟ್ರೀಟನ ನಿವಾಸಿ ಎಂದು ತಿಳಿದು ಬಂದಿದೆ.

ಬಾಲಕಿಯು ಮೂರ್ನಾಲ್ಕು ದಿನಗಳಿಂದ ಜ್ವರದಿಂದ ಬಳಲುತ್ತಿದ್ದು ಈ ಹಿನ್ನೆಲೆಯಲ್ಲಿ ಕಳೆದ 2 ದಿನಗಳ ಹಿಂದಷ್ಟೇ ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಲಾಗಿತ್ತು. ವೈದ್ಯರು ಈಕೆಯ ಜ್ವರಕ್ಕೆ ಸಂಬಂಧಿಸಿದಂತೆ ಶುಶ್ರುಷೆ ಸಹ ಮಾಡುತ್ತಿದ್ದರು. ಆಸ್ಪತ್ರೆಗೆ ದಾಖಲಾದ ಬಳಿಕ ಪ್ರಾಥಮಿಕವಾಗಿ ಜ್ವರಕ್ಕೆ ಮಾಡಬೇಕಾದ ಎಲ್ಲಾ ಪರೀಕ್ಷೆಗಳು (ಸಿ.ವಿ.ಸಿ, ಸಿ.ಆರ್.ಪಿ, ಮಲೇರಿಯಾ, ಡೆಂಗ್ಯೂ) ಮಾಡಿದಾಗ ಪರೀಕ್ಷೆಯಲ್ಲಿ ನೆಗೆಟಿವ್ ಎಂದು ವರದಿ ಬಂದಿದ್ದು ದ್ರಢಪಟ್ಟಿತ್ತು.  ಬಳಿಕ ಬಾಲಕಿಯ ಚಿಕಿತ್ಸೆ ಮುಂದುವರೆಸಿದ್ದ ವೈದ್ಯರು ಆಕೆ ಗುಣಮುಖರಾಗುತ್ತಾಳೆಂಬ ವಿಶ್ವಾಸದಲ್ಲಿದ್ದರು. ಆದರೆ ಗುರುವಾರದಂದು ತಡರಾತ್ರಿ 11 ಗಂಟೆಗೆ ಆಕಸ್ಮಿಕವಾಗಿ ಪಾರ್ಶ್ವವಾಯು (ಪೆರೆಲಿಸಿಸ್) ಉಂಟಾಗಿ ಬಾಲಕಿಯು ವಾಂತಿ ಮಾಡಿಕೊಂಡು ನಂತರ ಮ್ರತಪಟ್ಟಿದ್ದಾಳೆ.

ಈ ಬಗ್ಗೆ ಮಾತನಾಡಿದ ಮಕ್ಕಳ ತಜ್ಞ ಡಾ. ಸುರಕ್ಷಿತ್ ಶೆಟ್ಟಿ ‘ಚಿಕಿತ್ಸೆಗಾಗಿ ಆಸ್ಪತ್ರೆಯಲ್ಲಿಯೆ ದಾಖಲಾಗಿದ್ದ ಬಾಲಕಿಯು ಜ್ವರದಿಂದ‌ ಬಳಲುತ್ತಿದ್ದು ಗುರುವಾರದಂದು ಪಾರ್ಶ್ವವಾಯುಗೀಡಾಗಿ ವಾಂತಿಯ ವೇಳೆ ಇದರ ಅಂಶ ಶ್ವಾಸಕೋಶಕ್ಕೆ ತೆರಳಿದ್ದು ಉಸಿರಾಟಕ್ಕೆ ಸಮಸ್ಯೆಯಾಗಿ ಮ್ರತಪಟ್ಟಿದ್ದಾಳೆ. ಪ್ರಾಥಮಿಕವಾಗಿ ಪಾರ್ಶ್ವವಾಯುದಿಂದ ಮ್ರತಪಟ್ಟಿರುವುದಾಗಿ ಕಂಡು ಬಂದಿದೆ. ಆದರೆ ಬಾಲಕಿಯ ಸಾವಿಗೆ ನಿಖರವಾದ ಕಾರಣಕ್ಕಾಗಿ ಆಕೆಯ ಮರಣೋತ್ತರ ಪರೀಕ್ಷೆ ಮಾಡಿದ್ದಲ್ಲಿ ತಿಳಿದು ಬರಲಿದೆ.

ಈ ಬಗ್ಗೆ ತಾಲೂಕಾ ಆರೋಗ್ಯಾಧಿಕಾರಿ, ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಸವಿತಾ ಕಾಮತ ‘ಬಾಲಕಿಯ ಸಾವಿಗೆ ಪ್ರಾಥಮಿಕ ಹಂತದ ಪಾರ್ಶ್ವವಾಯು ಎಂಬುದು ತಿಳಿದು ಬಂದಿದ್ದು ಮರಣೋತ್ತರ ಪರೀಕ್ಷೆಯಿಂದ ಮಾತ್ರ ನಿಖರವಾದ ಕಾರಣ ತಿಳಿಯಲಿದ್ದು ಕುಟುಂಬಸ್ಥರ ನಿರಾಕರಣೆಯಿಂದ ಶವವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ. ಪ್ರಾಥಮಿಕವಾಗಿ ಬೇರೆ ಯಾವುದೇ ಮಾರಣಾಂತಿಕ ಕಾಯಿಲೆ ಇಲ್ಲ ಎನ್ನುವುದು ಸ್ಪಷ್ಟವಾಗಿದೆ. ಕೇರಳದಲ್ಲಿ ಸದ್ಯ ನಿಫಾ ರೋಗವು ಜನರನ್ನು ತತ್ತರಿಸುತ್ತಿದ್ದು, ಈ ಹಿನ್ನೆಲೆ ನಿಫಾ ವೈರಸ್ ಸೋಂಕಿತರ ಸಂಖ್ಯೆ ದಿನೇ ದಿನೇ ಏರಿಕೆ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಗಡಿ ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಅತ್ತ ಜಿಲ್ಲಾ ಮಟ್ಟದಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ವರ್ಚುವಲ್ ಸಭೆಯ ಮೂಲಕ ಇಲಾಖೆಗೆ ನಿಫಾ ಕುರಿತಾಗಿ ಮಾರ್ಗಸೂಚಿಯನ್ನು ವಿವರಿಸುತ್ತಿದ್ದು ಈ ಬಗ್ಗೆ ಇಲಾಖೆಯು ಕಾರ್ಯಪ್ರವ್ರತ್ತರಾಗಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ನಿಫಾದಿಂದ ಬಾಲಕಿ ಸಾವು.?

ಬಾಲಕಿಯು ಸಾವನ್ನಪ್ಪಿದ ಬಳಿಕ ಶುಕ್ರವಾರದಂದು ಮುಂಜಾನೆಯಿಂದ ಸಾರ್ವಜನಿಕರಿಂದ ಸಾಕಷ್ಟು ಪೋನ್ ಕಾಲಗಳು ಬರುತ್ತಲಿದ್ದು ನಿಫಾ, ಡೆಂಗ್ಯೂ ಸೇರಿದಂತೆ ಇನ್ನಿತರ ಮಾರಣಾಂತಿಕ ಕಾಯಿಲೆಯಿಂದ ಮ್ರತಪಟ್ಟಿದ್ದಾಳೆಂದು ಜನರು ಆತಂಕದಲ್ಲಿ ಕರೆ ಮಾಡುತ್ತಿದ್ದಾರೆ. ಸಾರ್ವಜನಿಕರಲ್ಲಿ ಒಂದು ವಿನಂತಿ ಸಮರ್ಪಕವಾದ ಮಾಹಿತಿ ಇಲ್ಲದೇ ಬಾಲಕಿಯ ಸಾವಿಗೂ ನಿಫಾ ಹಾಗೂ ಇನ್ನುಳಿದ ಕಾಯಿಲೆಗು ಯಾವುದೇ ಕಾರಣವಿಲ್ಲ. ಜನರು ಇಲ್ಲ ಸಲ್ಲದ ಮಾಹಿತಿ ಸಾಮಾಜಿಕ ಜಾಲತಾಣದಲ್ಲಿ ಹಾಕುವುದನ್ನು ನಿಲ್ಲಿಸಬೇಕು. ನಿಫಾ, ಡೆಂಗ್ಯೂ ಸೇರಿದಂತೆ ಯಾವುದೇ ಮಾರಣಾಂತಿಕ ರೋಗದ ಲಕ್ಷಣಗಳಿಲ್ಲ ಜನರು ಸುಮ್ಮನೆ ನಿಫಾದಂತಹ ರೋಗಗಳು ಭಟ್ಕಳದಲ್ಲಿ ಕಾಣಿಸಿಕೊಂಡಿದೆ ಎಂದು ಆತಂಕ ಪಡುವುದು ಬೇಡ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಸವಿತಾ ಕಾಮತ ಸ್ಪಷ್ಟಪಡಿಸಿದ್ದಾರೆ.

ಆನಂದ ಆಶ್ರಮ ಶಾಲೆಗೆ ಬಾಲಕಿ ಮ್ರತಪಟ್ಟಿದಕ್ಕೆ ರಜೆ ಘೋಷಣೆ

ಬಾಲಕಿ ಆನಂದ ಆಶ್ರಮ ಶಾಲೆಯಲ್ಲಿ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು ಕಳೆದ ಸೋಮವಾರದ ತನಕ ಶಾಲೆಗೆ ಬರುತ್ತಿದ್ದಳು. ಅದಾದ ನಂತರ ಶಾಲೆ ಗೈರಾಗಿದ್ದಳು. ಆ ಬಳಿಕ ಶುಕ್ರವಾರದಂದು ಬಾಲಕಿ ಮ್ರತಪಟ್ಟಿದ್ದ ವಿಷಯವನ್ನು ಆಕೆಯ ಪಾಲಕರಲ್ಲಿಯೇ ದೂರವಾಣಿ ಕರೆ ಮಾಡಿ ದ್ರಡಪಟ್ಟ ನಂತರ ಶಾಲೆಯ 1 ನೇ ತರಗತಿಯಿಂದ 7 ನೇ ತರಗತಿಯ ತನಕ ಆಕೆಯ ಅಕಾಲಿಕ ಮರಣ ಹಿನ್ನೆಲೆ ಆಕೆಯ ಆತ್ಮಕ್ಕೆ ಶಾಂತಿ ಕೋರಲೆಂದು ಶಾಲೆಗೆ ರಜೆ ಘೋಷಿಸಲಾಗಿದೆ. ಆದರೆ ತಾಲೂಕಿನ ಜನರಲ್ಲಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ನಿಫಾದಿಂದ ಬಾಲಕಿ ಮ್ರತಪಟ್ಟಿದ್ದು ಈ ಹಿನ್ನೆಲೆ ರಜೆ ಘೋಷಿಸಿದ್ದಾರೆಂದು ಸುಳ್ಳು ವಧಂತಿಯನ್ನು ಹಬ್ಬಿಸಿದ್ದಾರೆ ಎಂದು ಆನಂದ ಆಶ್ರಮ ಪ್ರಾಥಮಿಕ ಶಾಲೆಯ ಮುಖ್ಯಾಧ್ಯಾಪಕಿ ಸಿಸ್ಟರ್ ಲವೀನಾ ಜ್ಯೋತಿ ಅವರು  ಸ್ಪಷ್ಟಪಡಿಸಿದ್ದಾರೆ