ಬಾಸ್ಗೋಡ ಶಾಲೆಯಲ್ಲಿ ತಾಲ್ಲೂಕು ಮಟ್ಟದ ಸಸ್ಯ ಶ್ಯಾಮಲಾ ಕಾರ್ಯಕ್ರಮ

ಅಂಕೋಲಾ: ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಉತ್ತರ ಕನ್ನಡ, ಶಾಲಾ ಶಿಕ್ಷಣ ಇಲಾಖೆಯ ಮತ್ತು ಅರಣ್ಯ ಇಲಾಖೆಯ ಸಹಭಾಗಿತ್ವದಲ್ಲಿ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಯದ ನೇತ್ರತ್ವದಲ್ಲಿ ಸೋಮವಾರ ತಾಲ್ಲೂಕಿನ ಬಾಸ್ಗೋಡ ಶಾಲೆಯಲ್ಲಿ ತಾಲ್ಲೂಕು ಮಟ್ಟದ ಸಸ್ಯ ಶ್ಯಾಮಲಾ ಕಾರ್ಯಕ್ರಮ ನೆರವೇರಿತು.
ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಳಲಕ್ಷ್ಮೀ ಪಾಟೀಲ್ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಶಾಲೆಯ ಪರಿಸರದಲ್ಲಿ ಗಿಡ ನೆಡುವುದರ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಿಕ್ಷಣಾಧಿಕಾರಿ ಮಂಗಳಲಕ್ಷ್ಮಿ ಪಾಟೀಲ, ರಾಜ್ಯ ಸರ್ಕಾರದ ನಿರ್ದೇಶನದಂತೆ ಒಂದು ವರ್ಷದಲ್ಲಿ 50 ಲಕ್ಷ ಸಸಿ ನೆಡುವ ವಿನೂತನ ಯೋಜನೆ ಸಸ್ಯ ಶ್ಯಾಮಲಾವಾಗಿದೆ. ಸರ್ಕಾರದ ವಿವಿಧ ಇಲಾಖೆಗಳ ಸಹಯೋಗದಲ್ಲಿ, ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಜನಪ್ರತಿನಿಧಿಗಳ ಸಹಕಾರದೊಂದಿಗೆ ಶಾಲಾ ಅಭಿವೃದ್ಧಿ ಸಮಿತಿ, ಶಿಕ್ಷಕರು ಗ್ರಾಮದ ಹಿರಿಯರು ಹೀಗೆ ಎಲ್ಲರ ಸಹಕಾರದಿಂದ ವಿದ್ಯಾರ್ಥಿಗಳಲ್ಲಿ ಸಸಿ ನೆಡುವ ಕುರಿತು ಹಾಗೂ ಅವುಗಳ ಪ್ರಯೋಜನದ ಕುರಿತು ಅರಿವು ಮೂಡಿಸುವುದು ಈ ಕಾರ್ಯಕ್ರಮದ ಸದುದ್ದೇಶವಾಗಿದೆ. ಪರಿಸರ ರಕ್ಷಣೆಯ ದೃಷ್ಟಿಯಿಂದ ನಾವೆಲ್ಲರೂ ಮುಂದಾಗಿ ಕಾರ್ಯಪ್ರವೃತ್ತವಾಗಬೇಕಾಗಿದೆ. ವಿದ್ಯಾರ್ಥಿಗಳು ಶಾಲಾ ಪರಿವಾರದಲ್ಲಿ ನೆಟ್ಟ ಗಿಡಗಳನ್ನು ನಿರಂತರವಾಗಿ ಪೋಷಿಸಲಿದ್ದಾರೆ. ಇಂತಹ ಕಾರ್ಯಕ್ರಮಗಳು ಕೇವಲ ಆಚರಣೆಯಾಗದೆ, ಸಾಮಾಜಿಕ ಪ್ರೇರಣೆಯಿಂದ ಪಾಲನೆಯಾಗಬೇಕು ಎಂದರು.
ಒಂದರಿಂದ ಹನ್ನೆರಡನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಸಸ್ಯ ಶ್ಯಾಮಲಾ ಯೋಜನೆ ಅಡಿಯಲ್ಲಿ ಗಿಡ ನೆಡುವ ಮತ್ತು ಅದನ್ನು ಸಂರಕ್ಷಿಸುವ ಜವಾಬ್ದಾರಿ ನೀಡಿ, ಶಾಲೆಯಲ್ಲಿನ ಸ್ಥಳಾವಕಾಶದ ಲಭ್ಯತೆಯನ್ನು ಪರಿಶೀಲಿಸಿ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗುವುದು. ಪ್ರತಿಯೊಬ್ಬ ವಿದ್ಯಾರ್ಥಿ ಇಲ್ಲವೇ ಸ್ಥಳಾವಕಾಶ ಲಭ್ಯತೆಯ ಆಧಾರದಲ್ಲಿ ಎರಡರಿಂದ ಮೂರು ವಿದ್ಯಾರ್ಥಿಗಳು ಒಂದೊಂದು ಗಿಡ ನೆಡುವ ಪಾಲನೆ ಪೋಷಣೆ ಮಾಡುವ ಜವಾಬ್ದಾರಿ ಪಡೆಯುತ್ತಾರೆ. ಕನಿಷ್ಠ ಎರಡು ವರ್ಷಗಳವರೆಗೆ ಅವುಗಳ ಆರೈಕೆಯ ಮೇಲ್ವಿಚಾರಣೆ ನಡೆಯುತ್ತದೆ. ಈ ಕಾರ್ಯಕ್ರಮದ ನಂತರ ವಿದ್ಯುಕ್ತವಾಗಿ ತಾಲೂಕಿನಾದ್ಯಂತ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಈ ಯೋಜನೆಯ ಅಂಗವಾಗಿ ಸಸಿಗಳನ್ನು ನೆಡುವ ಕಾರ್ಯಕ್ರಮ ಮುಂದುವರೆಯಲಿದೆ ಎಂದು ಅವರು ತಿಳಿಸಿದರು.
ಶೇಟಗೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಲಕ್ಷ್ಮಿಧರ ನಾಯಕ ಮಾತನಾಡಿ ಶಿಕ್ಷಣಕ್ಕೆ ಸಂಬಂಧಿಸಿದಂತೆ ನಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಶಾಲೆಗಳ ಅಭಿವೃದ್ಧಿಗೆ ಅಗತ್ಯ ಸಹಕಾರ ನೀಡಲಾಗುವುದು. ಪರಿಸರಕ್ಕೆ ಪೂರಕವಾದ ಇಂತಹ ಕಾರ್ಯಕ್ರಮಗಳಿಗೆ ಸದಾ ಬೆಂಬಲ ನೀಡುತ್ತೇವೆ ಎಂದರು.ವಿದ್ಯಾರ್ಥಿಗಳು ತಮ್ಮ ಜವಾಬ್ದಾರಿ ಹೊಂದಿದ ಗಿಡ ನೆಡಲು ಸಂಭ್ರಮದಿಂದ ಸಜ್ಜುಗೊಂಡಿದ್ದರು. ಗಿಡ ನೆಡಲು ಮುಂದಾಗುತ್ತಿದ್ದಂತೆ ತುಂತುರು ಮಳೆ ಸುರಿದು ವಿದ್ಯಾರ್ಥಿಗಳ ಕಾರ್ಯಕ್ಕೆ ಸಾಥ್ ನೀಡಿದಂತಿತ್ತು. ಮಳೆಯ ನಡುವೆಯೂ ವಿದ್ಯಾರ್ಥಿಗಳು ಗಿಡ ನೆಟ್ಟು ಸಂಭ್ರಮಿಸಿದರು.

ನೋಟ್ ಬುಕ್ ವಿತರಣೆ.
ಸಸ್ಯ ಶ್ಯಾಮಲ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಂತರ ಶಾಲೆಯ ಸಭಾಭವನದಲ್ಲಿ ಆಯೋಜಿಸಿದ್ದ ಸಭಾ ಕಾರ್ಯಕ್ರಮದಲ್ಲಿ ಅಂಕೋಲಾ ತಾಲೂಕಿನ ಶಿಕ್ಷಣ ಸಂಯೋಜಕರಾದ ಬಿ.ಎಲ್.ನಾಯ್ಕರವರು ಶಾಲೆಯ ಎಲ್ಲಾ ಮಕ್ಕಳಿಗೂ ಸ್ವಂತ ಖರ್ಚಿನಿಂದ ನೋಟ್ ಬುಕ್ ವಿತರಿಸಿದರು. ರಾಷ್ಟ್ರೀಯ ಹಬ್ಬಗಳ ಆಚರಣೆಯ ಕುರಿತು ವಿದ್ಯಾರ್ಥಿಗಳು ಆಸಕ್ತಿವಹಿಸುವಂತೆ ಹಾಗೂ ಅವುಗಳನ್ನು ದಾಖಲಿಸಿಕೊಳ್ಳಲು ಅನುಕೂಲವಾಗುವಂತೆ ನೋಟ್ ಬುಕ್ ನೀಡಲಾಗಿದೆ ಎಂದು ಅವರು ತಿಳಿಸಿದರು. ಬಿ ಎಲ್ ನಾಯ್ಕ್ ಅವರ ಕಾರ್ಯಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದರು.
ಕ್ಷೇತ್ರ ಸಮನ್ವಯ ಅಧಿಕಾರಿ ಹರ್ಷಿತಾ ಗಾಂವಕರ ಶುಭ ಹಾರೈಸಿದರು. ಶಿಕ್ಷಣ ಸಂಯೋಜಕಿ ರಚನಾ ನಾಯಕ, ಬಿ.ಆರ್ .ಸಿ ರಾಘು ನಾಯ್ಕ್, ತಾಲ್ಲೂಕಿನ ಸಿ. ಆರ್.ಪಿ ಗಳು, ಎಸ್ ಡಿ ಎಂ ಸಿ ಅಧ್ಯಕ್ಷ ಸಂತೋಷ ಆಗೇರ, ಗ್ರಾಮ ಪಂಚಾಯಿತಿ ಸದಸ್ಯೆ ಆರತಿ ಆಗೇರ, ಗ್ರಾಮ ಪಂಚಾಯತಿ ಸದಸ್ಯೆ ಗಣಪತಿ ಆಗೇರ, ಶಾಲಾ ಮುಖ್ಯೋಧ್ಯಾಪಕಿ ರಾಜಮ್ಮ ಎಂ ನಾಯಕ ಶಿಕ್ಷಕಿಯರಾದ ಜಯಲಕ್ಷ್ಮಿ ಬಿ ನಾಯಕ, ಸುಮಂಗಲಾ ವಿ ನಾಯಕ, ಸುಮಿತ್ರಾ ಗೌಡ ಮತ್ತು ವಿದ್ಯಾರ್ಥಿಗಳ ಪಾಲಕರು ಹಾಜರಿದ್ದರು.