ಬೆಂಕಿಯ ಕೆನ್ನಾಲಿಗೆಗೆ ಭಸ್ಮವಾದ ಬಟ್ಟೆ ಅಂಗಡಿ

ಅಂಕೋಲಾ: ಪಟ್ಟಣದ ಮಾರುಕಟ್ಟೆಯ ಪ್ರಮುಖ ಆಯಕಟ್ಟಿನ ಜಾಗವಾದ ಅಂಬಾರಕೊಡ್ಲಾ ರಸ್ತೆಯ ಅಂಚಿನಲ್ಲಿದ್ದ ಬಟ್ಟೆಯ ಅಂಗಡಿಯೊಂದಕ್ಕೆ ರವಿವಾರ ರಾತ್ರಿ ಆಕಸ್ಮಿಕವಾಗಿ ತಗುಲಿದ ಬೆಂಕಿಯಿಂದ ಅಂಗಡಿಯಲ್ಲಿದ್ದ ಬಟ್ಟೆ ಪೀಠೋಪಕರಣ ಮತ್ತಿತರ ಸಾಮಗ್ರಿಗಳು ಬೆಂಕಿಗೆ ಆಹುತಿಯಾಗಿ ಲಕ್ಷಾಂತರ ಮೌಲ್ಯದ ಹಾನಿ ಸಂಭವಿಸಿದೆ.ತಾಲೂಕಿನ ಹೊನ್ನೆಕೇರಿಯ ದೀಪಕ ನಾಯ್ಕ ಅವರಿಗೆ ಸಂಬಂಧಿಸಿದ ರಾಯ್ ಫ್ಯಾಶನ್ ಅಂಗಡಿಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗುಲಿರಬಹುದು ಎಂದು ಅಂದಾಜಿಸಲಾಗಿದೆ.
ರವಿವಾರ ರಾತ್ರಿ ಅಂಗಡಿ ಮುಚ್ಚಿರುವ ವೇಳೆ ಬೆಂಕಿ ಕಾಣಿಸಿಕೊಂಡಿದ್ದು ಸ್ಥಳೀಯರು ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದಾರೆ. ಅಗ್ನಿಶಾಮಕ ವಾಹನ ಸ್ಥಳಕ್ಕೆ ಬರುವಷ್ಟರಲ್ಲಿಯೆ ಜೋರಾಗಿ ಹೊತ್ತಿಕೊಂಡ ಬೆಂಕಿ, ಅಂಗಡಿಯ ಪೀಠೋಪಕರಣ ರೆಡಿಮೇಡ್ ಬಟ್ಟೆಗಳನ್ನು ಸುಟ್ಟು ಕರಕಲಾಗುವಂತೆ ಮಾಡಿದೆ. ಪಕ್ಕದಲ್ಲಿದ್ದ ಬೇಕರಿ, ಟೈಪಿಂಗ್ ಸೆಂಟರಿಗೂ ಬೆಂಕಿ ತಗುಲಿತ್ತು ಅಗ್ನಿಶಾಮಕದವರ ಕ್ಷಿಪ್ರ ಕಾರ್ಯಾಚರಣೆಯಿಂದ ಹೆಚ್ಚಿಗೆ ವ್ಯಾಪಿಸಲಿಲ್ಲ. ಅಕ್ಕ ಪಕ್ಕದಲ್ಲಿ ಅಂಗಡಿಗಳನ್ನು ಹೊಂದಿರುವ ಇಕ್ಕಟ್ಟಿನ ಸಂದಿಗೊಂದಿಯ ಪ್ರದೇಶವಾಗಿದ್ದರಿಂದ ಬೆಂಕಿ ನಂದಿಸಲು ಅಗ್ನಿಶಾಮಕ ದಳದ ಸಿಬ್ಬಂದಿ ಹರಸಾಹಸ ಪಟ್ಟರು. ಸತತ ಎರಡು ಗಂಟೆಗಳ ಪರಿಶ್ರಮದಿಂದ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿ ಮೆಚ್ಚುಗೆಗೆ ಪಾತ್ರವಾದರು. ಈ ಮೂಲಕ ಸಂಭವಿಸಬಹುದಾದ ಬಾರಿ ಅನಾಹುತ ತಡೆದಂತಾಯಿತು. ಅಗ್ನಿಶಾಮಕ ದಳದ ಸಿಬ್ಬಂದಿಗಳಿಗೆ ಸ್ಥಳೀಯರು ಮತ್ತು ಪೊಲೀಸರು ಸಹಕಾರ ನೀಡಿದರು.
ಗಣೇಶ ಚತುರ್ಥಿಯ ವಿಶೇಷ ವ್ಯಾಪಾರಕ್ಕೆಂದು ಹೆಚ್ಚಿನ ಪ್ರಮಾಣದ ರೆಡಿಮೇಡ್ ಬಟ್ಟೆಗಳನ್ನು ಖರೀದಿಸಿ ಅಂಗಡಿಯಲ್ಲಿ ದಾಸ್ತಾನು ಇಡಲಾಗಿತ್ತು. ಅಗ್ನಿ ಅವಘಡದಿಂದ ಅವೆಲ್ಲವೂ ಸುಟ್ಟು ಕರಕಲಾಗಿ ಹೆಚ್ಚಿನ ಹಾನಿ ಸಂಭವಿಸಿದೆ.

ಕಳೆದ ಆರು ತಿಂಗಳಲ್ಲಿ ಇದೇ ರಸ್ತೆಯಲ್ಲಿನ ಮೂರು ಅಂಗಡಿಗಳಿಗೆ ಬೆಂಕಿ ತಗುಲಿದಂತಾಗಿದೆ. ಈ ರಸ್ತೆಯ ಕೂಡು ಪ್ರದೇಶದ ವೃತ್ತದಲ್ಲಿ ಒಂದೇ ಕಂಬದಲ್ಲಿ ಹಲವು ಅಂಗಡಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದ್ದು ಇದು ಶಾರ್ಟ್ ಸರ್ಕ್ಯೂಟ್ ಮತ್ತು ಇತರ ಅಗ್ನಿ ಅವಘಡಗಳಿಗೆ ಕಾರಣವಾಗುತ್ತಿದೆ ಎನ್ನುವ ಮಾತು ಕೇಳಿ ಬರುತ್ತಿದೆ. ಇಲ್ಲಿರುವ ಹಳೆಯ ಅಂಗಡಿಗಳ ವಿದ್ಯುತ್ ತಂತಿಗಳು ಮತ್ತು ಕಡಿಮೆ ಗುಣಮಟ್ಟದ ವಿದ್ಯುತ್ ಪರಿಕರಗಳಿಂದಲೂ ಶಾರ್ಟ್ ಸರ್ಕ್ಯೂಟ್ ಸಂಭವಿಸಿರಬಹುದಾದ ಸಾಧ್ಯತೆಗಳಿವೆ.