ಸಿದ್ದಾಪುರ : ತಾಲೂಕಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮೆಣಸಿಯ ಮುಖ್ಯ ಶಿಕ್ಷಕಿ ರೀಟಾ ಡಿಸೋಜ ಅವರು ಶಿರಸಿ ಶೈಕ್ಷಣಿಕ ಜಿಲ್ಲೆಯ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಪಡೆದುಕೊಂಡರು. ಇವರು ಕಳೆದ 27 ವರ್ಷಗಳಿಂದ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದು ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ 15 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಇಲಾಖೆಯಲ್ಲಿ ಅನುಪಮ ಸೇವೆಯನ್ನು ಸಲ್ಲಿಸುತ್ತಿರುವ ಇವರು
ಏಕ ಪಾಲಕ ಅನಾಥ ಮಕ್ಕಳಿಗೆ ಶಿಕ್ಷಣಕ್ಕೆ ಸಹಾಯ ಧನ ನೀಡುತ್ತಾ ಬಡ ಮಕ್ಕಳನ್ನು ದತ್ತು ಪಡೆದು ಅವರಿಗೆ ಒಂದರಿಂದ ಹತ್ತನೇ ತರಗತಿ ವರೆಗೆ ಶಿಕ್ಷಣ ಕೊಡಿಸುವ ಮೂಲಕ ಮಕ್ಕಳ ತಂದೆ ತಾಯಿ ಸ್ಥಾನದಲ್ಲಿ ನಿಂತು ಮಾಡುತ್ತಿರುವ ಇವರ ಕಾರ್ಯ ಶ್ಲಾಘನೀಯ. ಅತ್ಯುತ್ತಮ ಶಿಕ್ಷಕಿಯಾಗಿ, ಸಾಂಸ್ಕೃತಿಕ ಸಂಘಟಕಿಯಾಗಿ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ವಿಶೇಷವಾಗಿ ತೊಡಗಿಸಿಕೊಂಡಿರುವ ಇವರ ಶೈಕ್ಷಣಿಕ ಚಟುವಟಿಕೆ ಮತ್ತು ಶೈಕ್ಷಣಿಕ ಸೇವೆಯನ್ನು ಗುರುತಿಸಿ ಜಿಲ್ಲಾಮಟ್ಟದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ನೀಡಲಾಗಿದೆ . ಅವರ ಶಾಲೆಗೆ ಭೇಟಿ ನೀಡಿದ ನುಡಿಸಿರಿ ವರದಿಗಾರ ದಿವಾಕರ್ ನಾಯ್ಕ್ ಪ್ರಶಸ್ತಿ ಪಡೆದ ಶಿಕ್ಷಕಿಯೊಂದಿಗೆ ಸಂದರ್ಶನ ನಡೆಸಿದರು. ಶಾಲೆಯ ಸಹ ಶಿಕ್ಷಕಿ ( ಅತಿಥಿ ಶಿಕ್ಷಕಿ) ಭಾರತಿ ದಿವಸ್ಪತಿ ನಾಯ್ಕ ಪ್ರಶಸ್ತಿ ದೊರೆತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ಶಿಕ್ಷಕಿ ರೀಟಾ ಡಿಸೋಜ ತಮ್ಮ ಅಭಿಪ್ರಾಯ ಹಂಚಿಕೊಂಡರು.