ದಾಂಡೇಲಿ : ನಗರದ ಟೌನ್ ಶಿಪ್ ನಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮಾರ್ಗದರ್ಶನದಲ್ಲಿ 14ನೇ ಬ್ಲಾಕಿನ ಎರಡು, ಟೌನ್ ಶಿಪ್ ನ ಎರಡು ಮತ್ತು ಬಾಂಬೂಗೇಟ್ ಇಲ್ಲಿಯ ಒಂದು ಸೇರಿದಂತೆ ಒಟ್ಟು 5 ಅಂಗನವಾಡಿ ಕೇಂದ್ರಗಳ ಸಂಯುಕ್ತ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮವನ್ನು ಸಂಭ್ರಮ ಸಡಗರದಿಂದ ಇಂದು ಗುರುವಾರ ಆಚರಿಸಲಾಯಿತು.
ಕಾರ್ಯಕ್ರಮವನ್ನು ದಾಂಡೇಲಿ ನಗರಸಭೆಯ ಸದಸ್ಯರಾದ ಮೋಹನ್ ಹಲವಾಯಿ ಅವರು ಉದ್ಘಾಟಿಸಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಮಹತ್ವವನ್ನು ವಿವರಿಸಿದ್ದರು. ಮುಖ್ಯ ಅತಿಥಿಗಳಾಗಿ ನಗರಸಭೆಯ ವ್ಯವಸ್ಥಾಪಕರಾದ ಪರಶುರಾಮ ಶಿಂಧೆಯವರು ಭಾಗವಹಿಸಿ ಪುಟಾಣಿ ಮಕ್ಕಳಿಗೆ ಶುಭವನ್ನು ಹಾರೈಸಿದರು.
ಅಂಗನವಾಡಿ ಕೇಂದ್ರದ ಪುಟಾಣಿ ಮಕ್ಕಳು ಕೃಷ್ಣ ರಾಧೆಯರ ವೇಷ ಭೂಷಣವನ್ನು ತೊಟ್ಟು ಗಮನಸೆಳೆದರು. ಪುಟಾಣಿ ಮಕ್ಕಳ ತೊದಲು ನುಡಿಗಳು ಎಲ್ಲರ ಅಕ್ಕರೆಗೆ ಪಾತ್ರವಾಯಿತು. ಅಂಗನವಾಡಿ ಕೇಂದ್ರಗಳ ಕಾರ್ಯಕರ್ತೆಯರ ನಿರ್ದೇಶನದಲ್ಲಿ ಪುಟಾಣಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದಲ್ಲಿ ನಗರದ ವಿವಿಧ ಅಂಗನವಾಡಿ ಕೇಂದ್ರಗಳ ಶಿಕ್ಷಕಿಯರು, ಕಾರ್ಯಕರ್ತೆಯರು ಹಾಗೂ ಪುಟಾಣಿ ಮಕ್ಕಳ ಪಾಲಕರು ಉಪಸ್ಥಿತರಿದ್ದರು.