ಜೀವನ್ಮರಣ ಹೋರಾಟದಲ್ಲಿದ್ದ ಬಿಡಾಡಿ ದನವನ್ನು ರಕ್ಷಿಸಿದ ಸ್ಥಳೀಯರು ಮತ್ತು ಪಶುವೈದ್ಯ ಇಲಾಖೆಯ ಸಿಬ್ಬಂದಿಗಳು

ದಾಂಡೇಲಿ: ಅದೊಂದು ಮೂಕ ಜೀವ. ಜೀವನ್ಮರಣ ಹೋರಾಟದಲ್ಲಿ ಒದ್ದಾಡುತ್ತಿತ್ತು. ಅದರ ಆರೋಗ್ಯ ತೀವ್ರ ಹದಗೆಟ್ಟಿರುವುದನ್ನು ಅರಿತ ಸ್ಥಳೀಯರು ಅದರ ರಕ್ಷಣೆಗೆ ಮುಂದಾಗಿ, ಪಶುವೈದ್ಯ ಆಸ್ಪತ್ರೆಗೆ ದೂರವಾಣಿ ಕರೆ ಮಾಡಿ ಮಾಹಿತಿ ನೀಡಿದರು. ತಡವರಿಯದೇ ಸ್ಥಳಕ್ಕೆ ಪಶುವೈದ್ಯ ಆಸ್ಪತ್ರೆಯ ಸಿಬ್ಬಂದಿಗಳು ದೌಡಾಯಿಸಿ, ದನವನ್ನು ಪರೀಕ್ಷಿಸಿ, ತುರ್ತು ಚಿಕಿತ್ಸೆಯನ್ನು ನೀಡಿದರು.

ಇದು ದಾಂಡೇಲಿ ನಗರದ ಬಸ್ ನಿಲ್ದಾಣದ ಹತ್ತಿರದಲ್ಲಿರುವ ನಗರ ಸಭೆಯ ಮಳಿಗೆಯ ಮುಂಭಾಗದಲ್ಲಿ ಸಾವು ಬದುಕಿನ ನಡುವೆ ಒದ್ದಾಡುತ್ತಿದ್ದ ಬಿಡಾಡಿ ದನವೊಂದು ಸ್ಥಳೀಯರ ಸಮಯೋಚಿತ ರಕ್ಷಣೆಯಿಂದ ಬದುಕುಳಿದ ಘಟನೆಯಿದು. ಅಂದ ಹಾಗೆ ಇದು ಗುರುವಾರ ಈ ಘಟನೆ ನಡೆದಿದೆ.

ಇಲ್ಲಿ ಬಿಡಾಡಿ ದನವೊಂದು ಮಧ್ಯಾಹ್ನದಿಂದಲೆ ನಗರ ಸಭೆಯ ಮಳಿಗೆಯೊಂದರ ಮುಂಭಾಗದಲ್ಲಿ ಅನಾರೋಗ್ಯದಿಂದ ಒದ್ದಾಡುತ್ತಿತ್ತು. ಇದನ್ನು ಕಮಡ ಸ್ಥಳೀಯ ವರ್ತಕರಾದ ಪುನೀತ್ ನಾಯಕ, ಪತ್ರಕರ್ತ ಪ್ರವೀಣ್ ಕುಮಾರ್ ಸುಲಾಖೆ, ವರ್ತಕರುಗಳಾದ ಬಾಬು ಪಗಡೆ, ರಿಯಾಜ್ ನವಲಗುಂದ ಅವರ ತಂಡ ದನವನ್ನು ಉಪಚರಿಸಿ, ಅದಕ್ಕೆ ಆಹಾರವನ್ನು ನೀಡಿದ್ದರು. ಹೊಟ್ಟೆ ಉಬ್ಬರಿಸಿಕೊಂಡು ಶ್ವಾಸ ತೆಗೆಯಲು ಹೆಣಗಾಡುತ್ತಿದ್ದ ದನ ಜೀವನ್ಮರಣ ಹೋರಾಟದಲ್ಲಿ ಒದ್ದಾಡುತ್ತಿರುವುದರ ಬಗ್ಗೆ ಪಶುವೈದ್ಯ ಆಸ್ಪತ್ರೆಗೆ ಮಾಹಿತಿ ನೀಡಲಾಯ್ತು. ಪಶುವೈದ್ಯ ಆಸ್ಪತ್ರೆಯಿಂದ ಸಿಬ್ಬಂದಿಗಳು ತಡವರಿಯದೇ ಸ್ಥಳಕ್ಕಾಗಮಿಸಿ, ದನವನ್ನು ಪರೀಕ್ಷೆ ಮಾಡಿ ತುರ್ತು ಚಿಕಿತ್ಸೆ ಮಾಡಿ ಅದರ ಜೀವವನ್ನು ಉಳಿಸಿದ್ದಾರೆ. ಸ್ಥಳೀಯರ ಸಮಯೋಚಿತ ಸ್ಪಂದನೆ ಹಾಗೂ ಪಶುವೈದ್ಯ ಸಿಬ್ಬಂದಿಗಳು ತಡವರಿಯದೇ ಸ್ಥಳಕ್ಕೆ ಆಗಮಿಸಿ ಚಿಕಿತ್ಸೆಯನ್ನು ನೀಡಿ ದನದ ಜೀವವನ್ನು ಉಳಿಸಿದರು.