ಅಂಕೋಲಾ: ಹಿಮಾಲಯ ಶಿಕ್ಷಣ ಸಂಸ್ಥೆಯಲ್ಲಿ ಸಂಸ್ಕೃತ ದಿನಾಚರಣೆ.

ಅಂಕೋಲಾ: ತಾಲೂಕಿನ ಹಿಮಾಲಯ ಶಿಕ್ಷಣ ಸಂಸ್ಥೆಯಲ್ಲಿ ಶ್ರಾವಣ ಶುಕ್ಲ ಪೌರ್ಣಿಮೆಯಂದು ಸಂಸ್ಕೃತ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮದ ನಿಮಿತ್ತ ದೀಪ ಬೆಳಗಿಸಿ ಆಯೂರ್ವಧಿನಿ ಎಂಬ ಪುಸ್ತಕ ಬಿಡುಗಡೆಗೊಳಿಸಲಾಯಿತು.
ಹಿಮಾಲಯ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಎಮ್.ಆಯ್.ಮಹಾಲೆ ಮಾತನಾಡಿ, ಸಂಸ್ಕೃತ ಅತ್ಯಂತ ಪುರಾತನ ಇತಿಹಾಸವನ್ನು ಹೊಂದಿದೆ. ಸಂಸ್ಕೃತದ ಅಧ್ಯಯನ ಮಾನವನನ್ನು ಸುಸಂಸ್ಕೃತನಾಗಿ ಮಾಡುತ್ತದೆ ಎಂದು ಸಂಸ್ಕೃತ ಭಾಷೆಯ ಕುರಿತು ವಿಸ್ತಾರವಾಗಿ ವಿವರಿಸಿದರು.
ಹಿಮಾಲಯ ಶಾಲೆಯ ಮುಖ್ಯ ಶಿಕ್ಷಕಿ ಸವಿತಾ ಕಾನೋಜಿ ಮಾತನಾಡಿ , ದೇವಭಾಷೆ ಸಂಸ್ಕೃತವನ್ನು ನಾವೆಲ್ಲರೂ ಉಳಿಸಿ ಬೆಳೆಸಬೇಕಿದೆ ಎಂದು ತಿಳಿಸಿದರು.
ಶಾಲೆಯ ಕನ್ನಡ ಶಿಕ್ಷಕಿ ಉಮಾ ನಾಯಕ ಮಾತನಾಡಿ, ಯಾವುದೇ ವ್ಯವಹಾರಕ್ಕೆ ಮತ್ತು ಸಂಹವನಕ್ಕೆ ಭಾಷೆಯೇ ಮುಖ್ಯ ಮಾಧ್ಯಮ. ಭಾಷೆಯಿಂದ ಮಾನವನ ವಿಕಾಸ ಪರಿಪೂರ್ಣವಾಗಲು ಸಾಧ್ಯ. ಭಾಷಾಜ್ಞಾನದ ಗಳಿಕೆಯಿಂದ ವ್ಯಕ್ತಿತ್ವ ವಿಕಸನವಾಗುತ್ತದೆ ಎಂದರು.
ಸಂಸ್ಕೃತ ಬೋಧಕರಾದ ಗಣೇಶ ಭಟ್, ಎಲ್ಲರೂ ದೇವಭಾಷೆಯಾದ ಸಂಸ್ಕೃತವನ್ನು ಕಲಿತು, ಉಳಿಸಿ ಬೆಳೆಸಬೇಕಾದದ್ದು ಎಲ್ಲರ ಕರ್ತವ್ಯ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಸಂಸ್ಕೃತ ಭಾಷೆಯ ಪ್ರಾಮುಖ್ಯತೆಯ ಬಗ್ಗೆ ತಿಳಿಸಿದರು. ಖೈರುನ್ನಿಸ್ಸ ಖಾನ್ ಸ್ವಾಗತಿಸಿದರೆ, ಅಕ್ಷತಾ ಶೇಟ್ ವಂದಿಸಿದರು. ವೇದ ಕಾಮತ್ ಕಾರ್ಯಕ್ರಮವನ್ನು ನಿರೂಪಿಸಿದರು.